More

    ಮತ್ತೆ ಕೈ ತಪ್ಪಿದ ಟಿಕೆಟ್​: ಕಾಂಗ್ರೆಸ್​ ನಾಯಕರ ವಿರುದ್ಧ ಸಿಡಿದೆದ್ದ ಮುದ್ದಹನುಮೇಗೌಡ, ಕುಣಿಗಲ್​ನಲ್ಲಿ ಸ್ಪರ್ಧೆ ಖಚಿತ

    ತುಮಕೂರು: ರಾಜ್ಯಸಭೆಗೆ ಟಿಕೆಟ್ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರ ವಿರುದ್ಧ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಆಕ್ರೋಶ ಹೊರಹಾಕಿದ್ದಾರೆ.

    ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್​ನಿಂದ ಜೈರಾಮ್​ ರಮೇಶ್​ಗೆ ಟಿಕೆಟ್​ ಒಲಿದಿದೆ. ಇದರ ಬೆನ್ನಲ್ಲೇ ಅಸಮಾಧಾನ ಹೊರಹಾಕಿರುವ  ಎಸ್​.ಪಿ. ಮುದ್ದಹನುಮೇಗೌಡ, ಕಳೆದ ಬಾರಿ ಸಂಸತ್ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡದೆ, ಈಗ ರಾಜ್ಯಸಭೆಯಲ್ಲೂ ಅವಕಾಶ ನೀಡದೆ ನನ್ನನ್ನು ರಾಜಕೀಯದಿಂದ ಮುಗಿಸುವ ಹುನ್ನಾರ ನಡೆಸಿದ್ದಾರೆ ಎಂದು ಹರಿಹಾಯ್ದರು. ನನಗೆ ಟಿಕೆಟ್ ನೀಡದೆ ವಂಚಿಸಿಬಹುದು, ಆದರೆ ಕುಣಿಗಲ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ  ಸ್ಪರ್ಧಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪುನರುಚ್ಛರಿಸಿದರು. ಚುನಾವಣೆಯಲ್ಲಿ ಎಂದೂ ಗೆಲ್ಲದ ಸ್ವಯಂ ಘೋಷಿತ ನಾಯಕರಿಗೆ ಅವಕಾಶ ಕೊಡುತ್ತಿರುವಾಗ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯವಿರುವ ನಮಗೇಕೆ ಅವಕಾಶ ನಿರಾಕರಿಸಲಾಗಿದೆ? ಕನಿಷ್ಠ ಕಾರಣವನ್ನಾದರೂ ಹೇಳಬೇಕಲ್ವಾ? ಎಂದು ಪ್ರಶ್ನಿಸಿದ ಎಸ್​ಪಿಎಂ, ಸಂಸತ್ ಚುನಾವಣೆಯಲ್ಲಿ ರಾಜ್ಯದ ಉಸ್ತುವಾರಿಯಾಗಿ ಕೆ.ಸಿ.ವೇಣುಗೋಪಾಲ್ ಈಗ ಬೆಂಗಳೂರಿನಲ್ಲಿಯೇ ಇದ್ದಾರೆ. ನನಗೆ ಏನು ಭರವಸೆ ನೀಡಿದ್ದರು? ಅದರಂತೆ ಏಕೆ ನಡೆದುಕೊಳ್ಳಲಿಲ್ಲ? ಎಂಬುದನ್ನು ಅವರೇ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

    ಅಂದು ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಅವರು ನನಗೆ ಭರವಸೆ ಕೊಟ್ಟಿದ್ದರು. ಒಂದೇ ಒಂದು ರಾಜ್ಯಸಭಾ ಟಿಕೆಟ್ ಬಂದರೂ ನಿನಗೇ ಕೊಡುವೆ ಎಂದು. 2020ರಲ್ಲಿ ಅವಕಾಶ ಬಂದಿತ್ತು, ಆಗಲೂ ಕೊಡಲಿಲ್ಲ. 2022ರಲ್ಲಿ ಮತ್ತೊಂದು ಅವಕಾಶ ಬಂತು, ಈಗಲೂ ಟಿಕೆಟ್ ಕೊಟ್ಟಿಲ್ಲ. ನಾನು ಯಾರ ಬಳಿಯೂ ಟಿಕೆಟ್ ಬೇಕೇಬೇಕು ಅಂತ ಅರ್ಜಿ ಹಾಕಲಿಲ್ಲ. ನನ್ನನ್ನೇ ರಾಜ್ಯಸಭೆ ಆಯ್ಕೆ ಮಾಡಿ ಅಂತಾನೂ ಹೇಳಿಲ್ಲ. ಬಿ ಫಾರ್ಮ್ ಕೊಡಿ ಚುನಾವಣೆಗೆ ಸ್ಪರ್ಧಿಸ್ತೀನಿ ಅಂದಿದ್ದೀನಿ. ನಾನು ಹಿಂಬಾಗಲಿಂದ ಹೋಗಿ ಅರ್ಜಿ ಹಾಕಿಲ್ಲ. ಸ್ವತಃ ರಾಹುಲ್ ಗಾಂಧಿ ಅವರೇ ಅಂದು ಮಾತು ಕೊಟ್ಟಿದ್ದರು. ರಾಷ್ಟ್ರೀಯ ಪಕ್ಷದ ಪ್ರಮುಖ ಸರ್ವೋಚ್ಚ ನಾಯಕರೇ ಹೇಳಿದ ಮೇಲೆ ನನಗೆ ಅವಕಾಶ ಸಿಗುತ್ತೆ ಅಂತ ನೀರಿಕ್ಷೆ ಮಾಡಿದ್ದೆ. ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಪಕ್ಷಕ್ಕೆ ನನ್ನ ಅನಿವಾರ್ಯತೆ ಇಲ್ಲವೇನೋ ಅನ್ಸುತ್ತೆ. ಹಾಗಾಗಿ ಮುಂದಿನ ನಡೆ ಬಗ್ಗೆ ಸೂಕ್ತ ನಿರ್ಧಾರ ಮಾಡುವೆ ಎಂದರು.

    ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರೇ ನನ್ನ ವಿರುದ್ಧ ನಡೆಸಿದ್ದ ಷಡ್ಯಂತ್ರದ ಬಗ್ಗೆ ಇತ್ತೀಚಿಗೆ ಮಾಜಿ ಪ್ರಧಾನಿ ದೇವೇಗೌಡರು ಪ್ರಸ್ತಾಪಿಸಿದ್ದು, ರಾಜ್ಯ ಕಾಂಗ್ರೆಸ್ ಮುಖಂಡರು ಇದಕ್ಕೆ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.

    ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರ ಭಾರಿ ಸುದ್ದಿಯಲ್ಲಿತ್ತು. ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಸ್ಪರ್ಧಿಸಿದ್ದರು. ಮುದ್ದಹನುಮೇಗೌಡರಿಗೆ ಕೊನೇ ಕ್ಷಣದಲ್ಲಿ ಕಾಂಗ್ರೆಸ್​ನಿಂದ ಟಿಕೆಟ್​ ಕೈತಪ್ಪಿತ್ತು. ಅಂತಿಮವಾಗಿ ಸ್ಪರ್ಧೆಯಿಂದ ಕಾಂಗ್ರೆಸ್ ಹಿಂದೆ ಸರಿದಿತ್ತು. ಇದಕ್ಕೆಲ್ಲಾ ಕಾರಣ ಡಿಕೆ ಬ್ರದರ್ಸ್​ ಎಂದು ಹಲವು ಭಾರಿ ಎಸ್​ಪಿಎಂ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದರು. ನನ್ನನ್ನು ಎರಡನೇ ಸಲ ಸಂಸತ್​ ಪ್ರವೇಶಿಸದಂತೆ ದೊಡ್ಡ ಷಡ್ಯಂತ್ರ ಮಾಡಿದ ಮಹಾನುಭಾವರ ಮಾಹಿತಿ ನನ್ನ ಬಳಿಯಿದೆ. ಎಂಪಿ ಟಿಕೆಟ್​ ಕಿತ್ತುಕೊಂಡು ನನ್ನನ್ನು ರಾಜಕೀಯವಾಗಿ ಮುಗಿಸಲು ನಡೆಸಿರುವ ಕುತಂತ್ರಕ್ಕೆ ಕುಣಿಗಲ್​ ಜನರೇ ಉತ್ತರ ನೀಡುತ್ತಾರೆ ಎಂದು ಹಲವು ಬಾರಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

    ಮುದ್ದಹನುಮೇಗೌಡ ಬಿಜೆಪಿ ಅಭ್ಯರ್ಥಿ? ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ

    ಕಾರಲ್ಲೇ ಪ್ರೇಮಿಗಳ ಆತ್ಮಹತ್ಯೆ, ತಡರಾತ್ರಿಯೇ ಅಂತ್ಯಕ್ರಿಯೆ: ಮನೆಬಿಟ್ಟು ಬಂದ ಜೋಡಿ 5 ದಿನ ಪಟ್ಟ ಕಷ್ಟ ಅಷ್ಟಿಷ್ಟಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts