ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ BMW ಕಾರು ಪತ್ತೆ! ರಾತ್ರಿ ನಾನೇ ನೀರಲ್ಲಿ ಮುಳುಗಿಸಿದೆ ಎಂದ ಮಾಲೀಕ... ಏಕೆ ಗೊತ್ತಾ?

bmw car in kaveri water
Published on

ಶ್ರೀರಂಗಪಟ್ಟಣ: ಇಲ್ಲೊಬ್ಬ ಭೂಪ ತನ್ನ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ಕಾವೇರಿ ನದಿಯಲ್ಲಿ ಮುಳುಗಿಸಿದ್ದು, ಹರಸಾಹಸಪಟ್ಟು ಪೊಲೀಸರು ಆ ಕಾರನ್ನು ಹೊರ ತೆಗೆದ ಘಟನೆ ಗಂಜಾಂನ ನಿಮಿಷಾಂಬ-ಕರಿಘಟ್ಟ ಸೇತುವೆ ಬಳಿ ಸಂಭವಿಸಿದೆ.

ಕಾರಿನ ಮಾಲೀಕ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ ನಿವಾಸಿ ರೂಪೇಶ್. ​ಬುಧವಾರ ರಾತ್ರಿ ಕಾರು ಚಲಾಯಿಸಿಕೊಂಡು ಬಂದ ರೂಪೇಶ್​, ಗಂಜಾಂನ ನಿಮಿಷಾಂಬ-ಕರಿಘಟ್ಟ ಸೇತುವೆ ಕೆಳಭಾಗದ ಕಾವೇರಿ ನದಿಯ ನೀರಲ್ಲಿ ಮುಳುಗಿಸಿದ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಗುರುವಾರ ಬೆಳಗ್ಗೆ ಸ್ಥಳಕ್ಕೆ ಬಂದ ಶ್ರೀರಂಗಪಟ್ಟಣ ಪೊಲೀಸರು ಪರಿಶೀಲಿಸಿದಾಗ ಕಾರು ಇರುವುದು ಗೊತ್ತಾಯಿತು.

ಕಾರಿನ ಮಾಲೀಕ ರೂಪೇಶ್​ನನ್ನು ವಿಚಾರಿಸಿದಾಗ ಬುಧವಾರ ರಾತ್ರಿ ಕಾರಿನಲ್ಲಿ ಬರುವಾಗ ಬೆಂಗಳೂರಿನಿಂದಲೂ ಯಾರೋ ಅಪರಿಚಿತ ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಆಗಮಿಸಿ ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದರು. ಹೀಗಾಗಿ ಕಾವೇರಿ ನದಿಯೊಳಗೆ ಕಾರು ಚಲಾಯಿಸಿದೆ ಎಂದು ಪೊಲೀಸರ ಬಳಿ ಒಮ್ಮೆ ಹೇಳಿಕೆ ನೀಡಿದ್ದ. ಮತ್ತೊಮ್ಮೆ ಇನ್ನೊಂದು ರೀತಿಯ ಹೇಳಿಕೆ ನೀಡಿದ್ದ. ಗೊಂದಲಕ್ಕೆ ಒಳಗಾದ ಟೌನ್​ ಠಾಣೆ ಪೊಲೀಸರು ರೂಪೇಶ್​ ಅವರ ಸಂಬಂಧಿಗಳನ್ನು ಶ್ರೀರಂಗಪಟ್ಟಣಕ್ಕೆ ಕರೆಸಿ ವಿಚಾರಿಸಿದಾಗ, ಈತನ ತಾಯಿ ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದರು. ಅಂದಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದು ತಿಳಿದುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net