

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಗೋ ಸೇವಾ ಗತಿನಿಧಿ ಕರ್ನಾಟಕ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಪ್ರತಿಷ್ಠಾನವು ರಾಜ್ಯಾದ್ಯಂತ ನಂದಿ ರಥಯಾತ್ರೆ ಆಯೋಜಿಸಿದ್ದು ಗುರುವಾರ ಮೂಡುಬಿದಿರೆಗೆ ಆಗಮಿಸಿತು.
ಸ್ವರಾಜ್ಯ ಮೈದಾನ ಬಳಿ ಶಾಸಕ ಉಮಾನಾಥ ಕೋಟ್ಯಾನ್ ರಥಕ್ಕೆ ಆರತಿ ಬೆಳಗಿ ಸ್ವಾಗತಿಸಿದರು. ಬಳಿಕ ಚೆಂಡೆವಾದನ ಕುಣಿತ ಭಜನೆಯೊಂದಿಗೆ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯಿತು. ರಾತ್ರಿ ನಂದಿಪೂಜೆ ವಿಷ್ಣು ಸಹಸ್ರನಾಮ ಪಠಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಜೈನಮಠದ ಸ್ಚಸ್ತಿಶ್ರೀ ಭಟ್ಟಾರಕ ಚಾರು ಕೀರ್ತಿ ಸ್ವಾಮೀಜಿ, ಗೋ ಸಂಪತ್ತು ಉಳಿದರೆ ದೇಶ ಉಳಿದೀತು. ರೋಗ ಮುಕ್ತ ಭಾರತ ನಿರ್ಮಾಣವಾಗಬೇಕಾದರೆ ಗೋ ಸಂಪತ್ತು ಹೆಚ್ಚಬೇಕು. ಗೋಮೂತ್ರ ಆರೋಗ್ಯ ವರ್ಧಕವಾಗಿದ್ದು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ ಎಂದರು.
ವೀರಮಾರುತಿ ದೇವಸ್ಥಾನ ಮೊಕ್ತೇಸರ ಕರುಣಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಅಧ್ಯಕ್ಷ ಭಕ್ತಿ ಭೂಷಣದಾಸ್ ಗೋವಿನ ಮಹತ್ವ ತಿಳಿಸಿದರು. ವಿಶ್ವ ಹಿಂದು ಪರಿಷತ್ ತಾಲೂಕು ಉಪಾಧ್ಯಕ್ಷ ಶಾಂತರಾಮ್ ಕುಡ್ವ, ಹಿರಿಯ ಸಹಕಾರಿ ಧುರೀಣ ಎಂ.ದಯಾನಂದ ಪೈ, ದೈವಜ್ಞ ಡಾ.ಯೋಗಿ ಸುಧಾಕರ ತಂತ್ರಿ, ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಚಾಲಕ ರಾಘವೇಂದ್ರ ಭಂಡರ್ಕರ್ ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕ ಅಶೋಕ ಅಲಂಗಾರು ವಂದಿಸಿದರು.