

ಅರ್ಚನಾ ಪತಿಯ ಮನೆಗೆ ಬಂದಕೂಡಲೇ ಅವಳ ಅತ್ತೆ, ಮಾವ ಮತ್ತು ಪತಿ ಅವಳಿಗೆ ಹೊರಗೆ ಎಲ್ಲಿಯೂ ಕೆಲಸವನ್ನು ಮಾಡಬಾರದೆಂದು ತಾಕೀತು ಮಾಡಿದರು. ನಮ್ಮ ಕುಟುಂಬದಲ್ಲಿ ಯಾವ ಹೆಣ್ಣು ಮಕ್ಕಳನ್ನೂ ಕೆಲಸಕ್ಕೆ ಕಳಿಸುವುದಿಲ್ಲ, ನೀನು ಮನೆಯಲ್ಲಿಯೇ ಇದ್ದು ಮನೆಕೆಲಸಗಳನ್ನು ಮಾಡು ಎಂದು ಕಟ್ಟುನಿಟ್ಟಾದ ನಿರ್ಬಂಧ ವಿಧಿಸಿದರು. ಇದರಿಂದ ಅರ್ಚನಾಗೆ ತೀರಾ ಕೋಪ ಬಂದಿತು, ಬೇಸರವೂ ಉಂಟಾಯಿತು. ತನ್ನ ಬೇಸರವನ್ನು ಕಳೆಯಲು ಅರ್ಚನಾ ಸಾಮಾಜಿಕ ಜಾಲತಾಣಗಳ ಮೊರೆ ಹೋದಳು. ಆಕೆ ಸಿನಿಮಾ ಹಾಡುಗಳಿಗೆ ನೃತ್ಯವನ್ನು ಮಾಡಿ ಅವುಗಳ ರೆಕಾರ್ಡಿಂಗ್ ಮಾಡಿ, ಅವುಗಳ ರೀಲ್ಸ್ಗಳನ್ನು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ಳಲ್ಲಿ ಅಪ್ಲೋಡ್ ಮಾಡತೊಡಗಿದಳು.
ನೋಡಲು ಸುಂದರಿಯಾಗಿದ್ದು ಉತ್ತಮವಾಗಿ ನೃತ್ಯವನ್ನೂ ಮಾಡುತ್ತಿದ್ದ ಅರ್ಚನಾಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಅಭಿಮಾನಿಗಳು ಹುಟ್ಟಿಕೊಂಡರು. ಅಂತಹ ಅಭಿಮಾನಿಗಳಲ್ಲಿ ವಿಕ್ರಂ ಎನ್ನುವವನು ಅವಳ ಎಲ್ಲ ರೀಲ್ಸ್ಗಳಿಗೂ ಲೈಕ್ ಒತ್ತುತ್ತಿದ್ದನಲ್ಲದೆ, ಅವಳಿಗೆ ಸಂದೇಶಗಳನ್ನು ಕೂಡಾ ಕಳುಹಿಸತೊಡಗಿದ. ತನ್ನ ಕಟ್ಟಾ ಅಭಿಮಾನಿಯಾಗಿದ್ದ ವಿಕ್ರಂನ ಪೊ›ಫೈಲ್ ಅನ್ನು ಅರ್ಚನಾ ಗಮನಿಸಿದಳು. ನೋಡಲು ಸಿನಿಮಾ ಹೀರೋನಂತೆಯೇ ಕಾಣುತ್ತಿದ್ದ ವಿಕ್ರಂ ತಾನು ಮಧ್ಯಮವರ್ಗದ ಕುಟುಂಬಕ್ಕೆ ಸೇರಿದ್ದು ಕೆಲವು ಟಿವಿ ಸೀರಿಯಲ್ಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿರುವುದಾಗಿ ತಿಳಿಸಿದ್ದ. ತನಗೆ ದೇಶ, ವಿದೇಶಗಳನ್ನು ಸುತ್ತುವ ಆಸಕ್ತಿಯಿದೆ ಎಂದು ಹೇಳಿಕೊಂಡಿದ್ದ. ಅವನತ್ತ ಅರ್ಚನಾ ಆಕರ್ಷಿತಳಾಗಿ ಅವನೊಡನೆ ಚಾಟ್ ಮಾಡಲಾರಂಭಿಸಿದಳು. ನೀನು ಅತಿ ಸುಂದರಿ. ನಿನ್ನ ಫಿಗರ್ ಯಾವ ಹೀರೋಯಿನ್ಗೂ ಕಡಿಮೆಯಿಲ್ಲ ಎನ್ನುತ್ತಾ ಅರ್ಚನಾಳನ್ನು ಒಲಿಸಿಕೊಂಡ ವಿಕ್ರಂ, ಹಂತಹಂತವಾಗಿ ಅವಳೊಂದಿಗೆ ಸೆಕ್ಸ್ಚಾಟ್ ಪ್ರಾರಂಭಿಸಿದ. ಇಬ್ಬರೂ ನಗ್ನರಾಗಿ ವೀಡಿಯೋ ಚಾಟ್ಗಳನ್ನೂ ಮಾಡಲಾರಂಭಿಸಿದರು.
ಹೀಗೊಂದು ದಿನ ವಿಕ್ರಂ ಅರ್ಚನಾಳಿಗೆ ಕರೆ ಮಾಡಿ ತನ್ನನ್ನು ಭೇಟಿಯಾಗಲು ಕೋರಿದ. ಯಾವುದೋ ಸಬೂಬನ್ನು ಹೇಳಿ ಅರ್ಚನಾ ಅವನು ಹೇಳಿದ ಹೋಟೆಲ್ಲಿಗೆ ಹೋದಳು. ಅದೇ ಹೋಟೆಲ್ಲಿನಲ್ಲಿ ಅವರಿಬ್ಬರೂ ಪರಸ್ಪರ ಒಪ್ಪಂದದ ಲೈಂಗಿಕ ಕ್ರಿಯೆಯನ್ನು ನಡೆಸಿದರು. ‘ನನ್ನ ಗಂಡನಿಗಿಂತ ನೀನೇ ನನ್ನನ್ನು ಹೆಚ್ಚು ತೃಪ್ತಿಪಡಿಸಿದೆ’ ಎಂದು ಅರ್ಚನಾ ಅವನಿಗೆ ಹೇಳಿದಾಗ ತನ್ನನ್ನು ಮದುವೆಯಾಗಲು ವಿಕ್ರಂ ಅವಳನ್ನು ಕೋರಿದ. ಆಕೆ ಕೂಡಲೇ ಒಪ್ಪಿದಾಗ ವಿಕ್ರಂ ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ಮಾತಾಪಿತರಿಗೆ ಅವಳನ್ನು ತನ್ನ ಭಾವಿ ಪತ್ನಿಯೆಂದು ಪರಿಚಯಿಸಿದ. ಕಾಲಕ್ರಮೇಣ ಅರ್ಚನಾ ತನ್ನ ಗಂಡನಿಗೆ ಗೊತ್ತಾಗದಂತೆ ವಿಕ್ರಂನನ್ನು ಭೇಟಿಯಾಗುತ್ತಾ ಅವನೊಡನೆ ಸೆಕ್ಸ್ ಮಾಡುತ್ತಿದ್ದಳು.
ಒಂದು ದಿನ ಅರ್ಚನಾ ಸ್ನಾನಕ್ಕೆ ಹೋಗಿದ್ದಾಗ ಅವಳ ಫೋನ್ ರಿಂಗಣಿಸಿದ್ದನ್ನು ನೋಡಿ ರಾಕೇಶ್ ಅದನ್ನು ಕೈಗೆತ್ತಿಕೊಳ್ಳುವಷ್ಟರಲ್ಲೇ ಆ ಕರೆ ನಿಂತಿತು. ಯಾರು ಕರೆ ಮಾಡಿದ್ದರೆಂದು ಆತ ಗಮನಿಸಿದಾಗ ಅವನಿಗೆ ರಾಕೇಶ್ ಮತ್ತು ಅರ್ಚನಾಳ ಸೆಕ್ಸ್ಚಾಟ್ಗಳು ಕಂಡವು. ಗಾಬರಿಗೊಂಡ ರಾಕೇಶ್ ಪತ್ನಿ ಸ್ನಾನದಿಂದ ಹೊರಬಂದ ಕೂಡಲೇ ಅವಳನ್ನು ತರಾಟೆಗೆ ತೆಗೆದುಕೊಂಡ. ಕೂಡಲೇ ಮನೆಯನ್ನು ಬಿಟ್ಟು ಹೊರಟುಹೋಗಲು ಹೇಳಿ ಅವಳನ್ನು ಮನಬಂದಂತೆ ಥಳಿಸಿದ. ಅವಳ ಸೆಲ್ಫೋನ್ ತನ್ನೊಡನೆಯೇ ಇರಿಸಿಕೊಂಡ. ಮನೆಯಿಂದ ಹೊರಹೋಗದಂತೆ ಅವಳಿಗೆ ನಿರ್ಬಂಧವನ್ನು ಹೇರಿದ. ಒಂದು ವಾರ ಸೆಲ್ಫೋನ್ ಇರದ ಅರ್ಚನಾ ನೀರಿನಿಂದ ಹೊರಬಂದ ಮೀನಿನಂತಾದಳು. ಇನ್ನು ಎಂದೆಂದಿಗೂ ಕೆಟ್ಟ ಕೆಲಸವನ್ನು ಮಾಡುವುದಿಲ್ಲವೆಂದು ಹೇಳಿ ತನ್ನನ್ನು ಕ್ಷಮಿಸಲು ಗಂಡನನ್ನು ಕೋರಿದಳು. ಮನಕರಗಿದ ರಾಕೇಶ್ ಅವಳನ್ನು ಕ್ಷಮಿಸಿದ. ನಂತರ ಆಕೆ ಅತ್ತು ಕರೆದು ತನ್ನ ಫೋನ್ ಕೊಡಬೇಕೆಂದು ಬೇಡಿಕೊಂಡಾಗ ರಾಕೇಶ್ ಅವಳಿಗೆ ತನ್ನಲ್ಲಿದ್ದ ಹಳೆಯ ಕೇವಲ ಕರೆ ಮತ್ತು ಟೆಕ್ಸ್ ್ಟ ಮೆಸೇಜ್ ಮಾಡಬಹುದಾದ ಫೋನನ್ನು ಕೊಟ್ಟ.
ಒಂದು ತಿಂಗಳ ನಂತರ ತನ್ನ ಮಾವ ಜಮೀನನ್ನು ಮಾರಿ ಅದರಿಂದ ಲಭ್ಯವಾದ 10 ಲಕ್ಷ ರೂ. ನಗದನ್ನು ಮನೆಯಲ್ಲಿಟ್ಟಿರುವ ವಿಷಯ ಅರ್ಚನಾಳಿಗೆ ತಿಳಿಯಿತು. ಆಕೆ ವಿಕ್ರಂನನ್ನು ಸಂರ್ಪಸಿ ಹೇಗಾದರೂ ಮಾಡಿ ನಮ್ಮ ಅತ್ತೆ, ಮಾವಂದಿರಿಬ್ಬರನ್ನು ಕೊಂದು ಅವರ 10 ಲಕ್ಷ ರೂ.ಗಳನ್ನು ಕದ್ದು ಓಡಿ ಹೋಗಿ ನಾವಿಬ್ಬರೂ ಮದುವೆ ಮಾಡಿಕೊಂಡು ಸುಖವಾಗಿರೋಣ ಎಂದಳು. ಈ ಮಾತು ವಿಕ್ರಂಗೂ ಇಷ್ಟವಾಯಿತು. ಅವರಿಬ್ಬರೂ ಗುಟ್ಟಾಗಿ ಒಂದು ಜಾಗದಲ್ಲಿ ಸಂಧಿಸಿ ಹೇಗೆ ಕೊಲೆಯ ಯೋಜನೆಯನ್ನು ರೂಪಿಸಿದರು
ಒಂದು ರಾತ್ರಿ 8 ಗಂಟೆಗೆ ವಿಕ್ರಂ ತನ್ನೊಬ್ಬ ಸ್ನೇಹಿತನೊಡನೆ ಅರ್ಚನಾಳ ಮನೆಗೆ ಹೋದ. ಆತ ಮತ್ತು ಹಿಂಬದಿಯಲ್ಲಿ ಕುಳಿತ ಗೆಳೆಯ ಮುಖ ಸಂಪೂರ್ಣವಾಗಿ ಮುಚ್ಚುವಂತಹ ಹೆಲ್ಮೆಟ್ಗಳನ್ನು ಧರಿಸಿದ್ದರು. ಅರ್ಚನಾಳ ಮನೆಯ ಹಿಂಭಾಗದ ಕಾಂಪೌಂಡಿಗೆ ಹತ್ತಿಕೊಂಡಿದ್ದ ರಸ್ತೆಯಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ ಕಾಪೌಂಡನ್ನು ಹಾರಿ ಒಳಹೋದರು. ಪೂರ್ವಯೋಜನೆಯಂತೆ ಮನೆಯ ಹಿಂದಿನ ಬಾಗಿಲಿನ ಚಿಲಕವನ್ನು ಅರ್ಚನಾ ಹಾಕಿರಲಿಲ್ಲ. ಇಬ್ಬರೂ ನೇರವಾಗಿ ಮೆಟ್ಟಿಲುಗಳ ಮೂಲಕ ತಾರಸಿಗೆ ಹೋಗಿ ಅಲ್ಲಿ ಅಡಗಿದರು. ರಾತ್ರಿ 10 ಗಂಟೆಗೆ ಅರ್ಚನಾಳ ಅತ್ತೆ, ಮಾವ ತಮ್ಮ ಕೋಣೆಗೆ ಹೋದರು. ರಾಕೇಶ್ 11 ಗಂಟೆಗೆ ನಿದ್ರೆಗೆ ಜಾರಿದ.
ಎಲ್ಲರೂ ನಿದ್ರಿಸುತ್ತಿರುವುದನ್ನು ಖಚಿತ ಮಾಡಿಕೊಂಡ ಅರ್ಚನಾ, ಮಧ್ಯರಾತ್ರಿಯ ನಂತರ ರಾಕೇಶ್ನ ಮೊಬೈಲಿಗೆ ಕಾಲ್ ಮಾಡಿ, ‘ನೀನು ಈಗ ನಿನ್ನ ಕೆಲಸವನ್ನು ಮಾಡಬಹುದು’ ಎಂದು ತಿಳಿಸಿದಳು. ವಿಕ್ರಂ ಮತ್ತು ಆತನ ಸ್ನೇಹಿತ ರಾತ್ರಿ 2 ಗಂಟೆಗೆ ತಾರಸಿಯಿಂದ ಕೆಳಗಿಳಿದು ನೆಲಮಹಡಿಯ ಶ್ಯಾಮಸುಂದರನ ಕೋಣೆಗೆ ಬಂದರು. ವಾಡಿಕೆಯಂತೆ ಅವರು ತಮ್ಮ ಕೋಣೆಗೆ ಚಿಲಕವನ್ನು ಹಾಕಿರಲಿಲ್ಲ. ಕೋಣೆಯೊಳಗೆ ಹೋದ ಹಂತಕರು ವೃದ್ಧ ದಂಪತಿಯ ಮೂಗುಗಳಿಗೆ ದಿಂಬನ್ನಿಟ್ಟು ಒತ್ತಿ ಉಸಿರುಗಟ್ಟಿಸಿ ಅವರನ್ನು ಕೊಂದರು. ನಂತರ ರೂಮನ್ನು ಜಾಲಾಡಿ ಅಲ್ಲಿದ್ದ 10 ಲಕ್ಷ ರೂ. ನಗದು ಮತ್ತು ಎಲ್ಲ ಆಭರಣಗಳನ್ನು ದೋಚಿ ಹಿಂದಿನ ಬಾಗಿಲಿನಿಂದ ಹೊರಟು ಹೋದರು.
ಬೆಳಗ್ಗೆ ಎಂದಿನಂತೆ ಬೇಗ ಎದ್ದ ರಾಕೇಶ್ ಚಹಾ ಕುಡಿಯಲು ಕೆಳಗೆ ಹೋದಾಗ ತನ್ನ ಮಾತಾಪಿತರು ತಮ್ಮ ಕೋಣೆಯಿಂದ ಇನ್ನೂ ಹೊರಗೆ ಬಾರದಿರುವುದನ್ನು ಗಮನಿಸಿ ಕೋಣೆಯೊಳಗೆ ಹೋದ. ಅಸ್ತವ್ಯಸ್ತವಾಗಿದ್ದ ಕೋಣೆಯನ್ನೂ, ಇನ್ನೂ ಮಂಚದ ಮೇಲೆಯೇ ಮಲಗಿದ್ದ ಮಾತಾಪಿತರನ್ನು ಕಂಡು ಗಾಬರಿಯಗಿ ಅವರ ಬಳಿ ಹೋಗಿ ನೋಡಿದ. ಅವರು ಸತ್ತಿರುವುದನ್ನು ಕಂಡ ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ. ತಕ್ಷಣ ಪೊಲೀಸ್ ಸಿಬ್ಬಂದಿ ಆಗಮಿಸಿ ದರೋಡೆ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡರು. ಮನೆಯಲ್ಲಿ ಯಾವ ಬೆರಳಚ್ಚು ಗುರುತೂ ಇರಲಿಲ್ಲ. ಆದರೆ, ಕಳ್ಳರು ಮನೆಯ ಹಿಂದಿನ ಬಾಗಿಲಿನಿಂದ ಹೊರಹೋದದ್ದು ತಿಳಿಯಿತು. ಮನೆಯ ಹಿಂದಿನ ರಸ್ತೆಯಲ್ಲಿ ಯಾವುದಾದರೂ ಸಿಸಿ ಟಿವಿ ಇದ್ದು ಅದರಲ್ಲೇನಾದರೂ ಕುರುಹುಗಳು ಸಿಗಬಹುದೇನೋ ಎಂದು ಪೊಲೀಸರು ಪರಿಶೀಲಿಸಿದರು.
ಹೆಲ್ಮೆಟ್ ಧರಿಸಿದ್ದ ಇಬ್ಬರು ವ್ಯಕ್ತಿಗಳು ಮೋಟಾರ್ ಸೈಕಲ್ನಲ್ಲಿ ಬಂದು ರಾಕೇಶ್ ಮನೆಯ ಕಾಂಪೌಂಡಿನ ಬಳಿ ಸ್ಕೂಟರ್ ನಿಲ್ಲಿಸಿದ್ದು ಹಾಗೂ ಅವರೇ ಬೆಳಗಿನ 3 ಗಂಟೆ 20 ನಿಮಿಷಕ್ಕೆ ಅಲ್ಲಿಂದ ಬ್ಯಾಗೊಂದನ್ನು ಹಿಡಿದು ಹೋದದ್ದು ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಆದರೆ, ಆ ವಾಹನದ ನಂಬರ್ ಪ್ಲೇಟ್ಗೆ ಮಣ್ಣು ಹತ್ತಿದ್ದ ಕಾರಣ ಯಾವ ವಾಹನವೆಂದು ತಿಳಿಯಲಾಗಲಿಲ್ಲ. ಆ ಪ್ರದೇಶದ ಸೆಲ್ ಫೋನ್ ಟವರ್ಗಳ ಡಂಪ್ಗಳ ಸಂಖ್ಯೆಗಳನ್ನು ಅವಲೋಕಿಸಲಾಯಿತು. ರಾತ್ರಿ ಅಂದಾಜು 2 ಗಂಟೆಗೆ 2 ಫೋನ್ಗಳ ನಡುವೆ ಸುಮಾರು 5 ಸೆಕೆಂಡ್ಗಳ ಸಂಭಾಷಣೆ ನಡೆದಿದ್ದು ತಿಳಿಯಿತು. ಆ ಫೋನುಗಳ ಐಎಂಈಐ ನಂಬರ್ಗಳನ್ನು ಪರಿಶೀಲಿಸಿದಾಗ ಅದರಲ್ಲಿ ಒಂದು ರಾಕೇಶನ ಹೆಸರಿನಲ್ಲಿತ್ತು. ಅವನನ್ನು ವಿಚಾರಿಸಿದಾಗ ಆತ ಅದನ್ನು ತನ್ನ ಪತ್ನಿ ಅರ್ಚನಾಳಿಗೆ ಕೊಟ್ಟಿದ್ದಾಗಿ ಹೇಳಿದ. ಅವಳನ್ನು ಕೂಲಂಕಷವಾಗಿ ವಿಚಾರಣೆ ಮಾಡಿದಾಗ ಸತ್ಯ ಹೊರಬಂದಿತು. ತಮ್ಮ ನಡುವಿನ ಗುಪ್ತ ಸಂಭಾಷಣೆಗಾಗಿ ವಿಕ್ರಂ ತನಗೆ ಒಂದು ಸಿಮ್ ಕೊಟ್ಟಿದ್ದು ಅದನ್ನು ತಾನು ತನ್ನ ಸೆಲ್ಫೋನಿಗೆ ಹಾಕಿಕೊಂಡಿದ್ದೆ ಎಂದವಳು ತಪ್ಪೊಪ್ಪಿಕೊಂಡಳು.
ನಂತರ ವಿಕ್ರಂನನ್ನು ಬಂಧಿಸಿ ಅವನ ಮೂಲಕ ಅವನ ಗೆಳೆಯನನ್ನೂ ಬಂಧಿಸಲಾಯಿತು. ಮನೆಯಿಂದ ಕಳವು ಮಾಡಿದ್ದ ಎಲ್ಲ ಆಭರಣಗಳೂ ಪತ್ತೆಯಾದವು. ಆದರೆ, 10 ಲಕ್ಷ ನಗದು ಹಣದಲ್ಲಿ 2 ಲಕ್ಷ ರೂ.ಗಳನ್ನು ವಿಕ್ರಂ ಖರ್ಚು ಮಾಡಿದ್ದ. ಎಲ್ಲರನ್ನೂ ಬಂಧಿಸಿ ಜೈಲಿಗಟ್ಟಲಾಯಿತು.
ಒಂದು ವೇಳೆ ವಿಕ್ರಂ ಮತ್ತು ಅರ್ಚನಾ ನಡುವೆ ಆ ರಾತ್ರಿ ಸಂಭಾಷಣೆ ನಡೆಯದಿದ್ದಲ್ಲಿ ಇದು ಪತ್ತೆಯಾಗದ ಪ್ರಕರಣವಾಗುತ್ತಿತ್ತು. ಎಷ್ಟೇ ವಿಸõತವಾಗಿ ಯೋಜನೆ ಹಾಕಿದರೂ ಮಾಡಿದ ಒಂದು ಸಂಭಾಷಣೆಯಿಂದ ಅಪರಾಧಿಗಳು ಸಿಕ್ಕಿಬಿದ್ದರು. ನ ಜಾತು ಕಾಮಃ ಕಾಮಾನಾಂ ಉಪಭೋಗೇನ ಶಾಮ್ಯತಿ, ಹವಿಷಾ ಕೃಷ್ಣವತ್ಮೇವ ಭೂಯ ಏವಾಭಿವರ್ಧತೇ ಎನ್ನುತ್ತದೆ ಸುಭಾಷಿತ. ಇದರರ್ಥ ಕಾಮನೆಗಳ ಉಪಭೋಗದಿಂದ ಕಾಮವು ಶಾಂತವಾಗುವುದಿಲ್ಲ. ಬೆಂಕಿಗೆ ತುಪ್ಪವನ್ನು ಹಾಕಿದಷ್ಟೂ ಅದು ಹೆಚ್ಚಾಗುವಂತೆ ಕಾಮವನ್ನು ನಿಯಂತ್ರಿಸದೇ ಹೋದರೆ ಅದೊಂದು ದೊಡ್ಡ ರೋಗವಾಗಿ ಪರಿಣಮಿಸಿ ನಮ್ಮನ್ನು ವಿವೇಚನಾರಹಿತವಾಗಿ ಮಾಡುತ್ತದೆ. ಇದೇ ಅರ್ಚನಾಳಿಗೂ ಆದದ್ದು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)