ನವದೆಹಲಿ: ಕರೊನಾ ಲಸಿಕೆ ವಿಚಾರ ಬಂದಾಗ ರಷ್ಯಾ, ಅಮೆರಿಕ, ಬ್ರಿಟನ್ ಮೊದಲಾದ ರಾಷ್ಟ್ರಗಳ ಹೆಸರಷ್ಟೇ ಮುಂಚೂಣಿಯಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿವೆ. ಆದರೆ, ಚೀನಾ ಈ ಎಲ್ಲ ರಾಷ್ಟ್ರಗಳಿಗೂ ಪೈಪೋಟಿ ನೀಡುತ್ತಿದೆ.
ಆಯಾ ದೇಶಗಳಲ್ಲಿ ಒಂದೆರಡು ಲಸಿಕೆಗಳು ಮಾತ್ರ ಸಿದ್ಧಗೊಳ್ಳುತ್ತಿದ್ದರೆ, ಚೀನಾವೊಂದರಲ್ಲಿಯೇ ಆರು ಲಸಿಕೆಗಳು ಮಾನವರ ಮೇಲೆ ಪ್ರಯೋಗದ ಅಂತಿಮ ಹಂತದಲ್ಲಿವೆ. ಈಗಾಗಲೇ ಒಂದು ಲಸಿಕೆ ಸೇನೆಯವರ ಬಳಕೆಗೆಂದೇ ನೋಂದಣಿಯೂ ಆಗಿದೆ.
ಇದನ್ನೂ ಓದಿ; ಭಾರತೀಯರಿಗೆ ವರ್ಷಾಂತ್ಯಕ್ಕೆ ದೊರೆಯಲಿದೆ ಮೊದಲ ಕರೊನಾ ಲಸಿಕೆ; ಆದರೆ, ಭಾರತದ್ದಲ್ಲ….!
ಇದೀಗ ಚೀನಾದ ಸರ್ಕಾರಿ ಒಡೆತನದ ಸಿನೋಫಾರ್ಮ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆ ಡಿಸೆಂಬರ್ ವೇಳೆಗೆ ಮಾರುಕಟ್ಟೆಗೆ ಬರಲಿದ್ದು, ಸಾರ್ವತ್ರಿಕ ಬಳಕೆಗೆ ದೊರೆಯಲಿದೆ. ಈ ಮಾಹಿತಿಯನ್ನು ಕಂಪನಿಯೇ ಬಿಡುಗಡೆ ಮಾಡಿದೆ.
ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ಪ್ರಕಾರ ಇದೇ ವರ್ಷದ ಡಿಸೆಂಬರ್ಗೆ ಲಸಿಕೆ ದೊರೆಯಲಿದೆ. ಲಸಿಕೆಯ ಎರಡು ಡೋಸ್ಗಳಿಗೆ ಒಂದು ಸಾವಿರ್ ಯುವಾನ್ಗೂ ಕಡಿಮೆ ಬೆಲೆ ನಿಗದಿಪಡಿಸಲಾಗುತ್ತದೆ ಎಂದು ಹೇಳಲಾಗಿದೆ. ರೂಪಾಯಿಗಳಲ್ಲಿ ಹೇಳುವುದಾದರೆ ಅಂದಾಜು 10,000 ರೂ.ಗೂ ಅಧಿಕ ಬೆಲೆ ಇರಲಿದೆ.
ಇದನ್ನೂ ಓದಿ; ಚೀನಾದಲ್ಲಿ ಮಸೀದಿಗಳು ಧ್ವಂಸ; ಅದೇ ಜಾಗದಲ್ಲಿ ಪ್ರವಾಸಿಗರಿಗಾಗಿ ಶೌಚಗೃಹ, ಮದ್ಯದಂಗಡಿ ನಿರ್ಮಾಣ
ಸದ್ಯ ಅಮೆರಿಕದ ಲಸಿಕೆಗೆ ಅಂದಾಜು 2,400 ರೂ.ಗಳಿಂದ 2,800 ರೂ. ವರೆಗೆ ದರ ನಿಗದಿಪಡಿಸಲಾಗಿದೆ. ಚೀನಿ ಲಸಿಕೆ ಅದಕ್ಕಿಂತಲೂ ದುಬಾರಿಯಾಗಿದೆ. ಆದರೆ, ಆಕ್ಸ್ಫರ್ಡ್ ವಿವಿ ಲಸಿಕೆ ಭಾರತದಲ್ಲಿ 225 ರೂ.ಗೆ ದೊರೆಯಲಿದೆ. ಸದ್ಯ ಸಿನೋಫಾರ್ಮಾದ ಲಸಿಕೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಮಾನವರ ಮೇಲೆ ಅಂತಿಮ ಹಂತದ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದಾಗುತ್ತಿದ್ದಂತೆ ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಆರಂಭೀಸುವ ಉದ್ದೇಶ ಹೊಂದಲಾಗಿದೆ.
ಲಸಿಕೆಗಳ ಮೇಲಿನ ಭರವಸೆಯನ್ನೇ ಬುಡಮೇಲು ಮಾಡಲಿದೆ ಕರೊನಾ ವೈರಸ್ನ ರೂಪಾಂತರ; ಭಾರತದಲ್ಲೂ ಇದೆ ಕುರುಹು