ಕೋರ್ಟ್​ ಮೆಟ್ಟಿಲೇರಿದ 'ಸೋಜುಗಾದ ಸೂಜು ಮಲ್ಲಿಗೆ' ವಿವಾದ: ಜಿಜಿವಿವಿ ಚಿತ್ರತಂಡಕ್ಕೆ ಎದುರಾಯ್ತು ಸಂಕಷ್ಟ

1198952
Published on

ಚಾಮರಾಜನಗರ: ‘ಗರುಡ ಗಮನ ವೃಷಭ ವಾಹನ’ ಸಿನಿಮಾ ತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಲೆಮಹದೇಶ್ವರಸ್ವಾಮಿ ಕುರಿತ 'ಸೋಜುಗಾದ ಸೂಜು ಮಲ್ಲಿಗೆ...' ಹಾಡನ್ನು "ಗರುಡ ಗಮನ ವೃಷಭ ವಾಹನ'' ಸಿನಿಮಾದಲ್ಲಿ ಕ್ರೌರ್ಯದ ದೃಶ್ಯಕ್ಕೆ ಬಳಸಿಕೊಂಡಿದ್ದರ ವಿರುದ್ಧ ಮಾದಪ್ಪನ ಭಕ್ತರಿಂದ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ, ಚಿತ್ರತಂಡದ ವಿರುದ್ಧ ಕರುನಾಡ ವಿಜಯ ಸೇನೆ ಸಂಘಟನೆ ನ್ಯಾಯಾಲಯದ ಮೆಟ್ಟಿಲೇರಿದೆ.

ಸಂಘಟನೆಯ ಬೆಂಗಳೂರು ನಗರಾಧ್ಯಕ್ಷ ವಿಜಯಕುಮಾರ್​ ಅವರು ಬೆಂಗಳೂರಿನ ಸಿವಿಲ್​ ಕೋರ್ಟ್​ಗೆ ಈ ಕುರಿತು ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದ ನಿರ್ದೇಶಕ ರಾಜ್​ ಬಿ.ಶೆಟ್ಟಿ, ನಟ ರಿಷಬ್​ ಶೆಟ್ಟಿ, ನಿರ್ಮಾಪಕರಾದ ಬಿ.ವಿ.ರವಿ ರೈ, ವಚನಶೆಟ್ಟಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.

ಕೊಲೆ ಮಾಡಿ ವಿಕೃತಿ ಮೆರೆಯುವ ದೃಶ್ಯಕ್ಕೆ ಮಾದಪ್ಪನ ಭಕ್ತೀಗಿತೆಯನ್ನು ಹಿನ್ನೆಲೆಯಾಗಿ ಬಳಕೆ ಮಾಡಿಕೊಂಡಿರುವುದು ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆ ತಂದಿದೆ. ಆದ್ದರಿಂದ ಸಿನಿಮಾದಲ್ಲಿ ಈ ಹಾಡನ್ನು ತೆಗೆಯಬೇಕೆಂದು ಕೋರಿದ್ದಾರೆ. ಈ ಕುರಿತು ಮಂಗಳವಾರ ವಿಚಾರಣೆ ನಡೆಯಲಿದೆ ಎಂದು ಸೇನೆಯ ಅಧ್ಯಕ್ಷ ಬಿ.ಮೋಹನ್​ಕುಮಾರ್​ "ವಿಜಯವಾಣಿ''ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net