

Teacher : ಬಾಲಕನೊಬ್ಬ ತರಗತಿಯಲ್ಲೇ ನಿದ್ರೆಗೆ ಜಾರಿರುವುದನ್ನು ಮರೆತು ಶಾಲಾ ಶಿಕ್ಷಕನೊಬ್ಬ ಕ್ಲಾಸ್ರೂಮ್ ಲಾಕ್ ಮಾಡಿಕೊಂಡು ಹೊರಟುಹೋದ ಘಟನೆ ಕಳೆದ ಗುರುವಾರ ಬೆಳಗ್ಗೆ ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣದ ವಿವರವನ್ನು ನೋಡುವುದಾದರೆ,ನಾಗರ್ಕರ್ನೂಲ್ ಜಿಲ್ಲೆಯ ಲಿಂಗಲ ಮಂಡಲದ ಸೈನ್‌ಪೇಟ್ ಸರ್ಕಾರಿ ಶಾಲೆಯಲ್ಲಿ ಸಮಯ ಮುಗಿದಾಗ, ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಬಳಿಕ ಶಿಕ್ಷಕರು ಕೊಠಡಿಗಳಿಗೆ ಲಾಕ್ ಮಾಡಿ ಅಲ್ಲಿಂದ ಹೊರಟುಹೋದರು.
ಆದರೆ, ಒಂದನೇ ತರಗತಿಯ ವಿದ್ಯಾರ್ಥಿ ಶರತ್ ನಿದ್ರೆಗೆ ಜಾರಿದ್ದರಿಂದ ಕೋಣೆಯಲ್ಲಿಯೇ ಉಳಿದುಕೊಂಡಿದ್ದ. ಮಧ್ಯಾಹ್ನ 3.30ಕ್ಕೆ ಮನೆಗೆ ಬರಬೇಕಿತ್ತು. ಆದರೆ, 4 ಗಂಟೆ ಕಳೆದರೂ ಮಗ ಮನೆಗೆ ಬಾರದಿದ್ದಾಗ, ಆತಂಕಗೊಂಡ ತಂದೆ ಎಲ್ಲರನ್ನು ವಿಚಾರಿಸಿದರು. ಅಲ್ಲದೆ, ಮಲ್ಲೇಶ್ ಶಾಲೆಗೆ ಹೋಗಿ ಮಗನಿಗಾಗಿ ಹುಡುಕಿದರು.
ಮಗನನ್ನು ಹುಡುಕಾಡುತ್ತಾ ಮಲ್ಲೇಶ್ ಅವರು ತರಗತಿಯ ಕಿಟಕಿಯನ್ನು ತೆರೆದು ನೋಡಿದ್ದಾರೆ. ಈ ವೇಳೆ ಶರತ್ ಒಳಗಡೆ ಮಲಗಿದ್ದ. ತಕ್ಷಣ ಮಲ್ಲೇಶ್ ಅವರು ಕೊಠಡಿಯ ಬೀಗವನ್ನು ಒಡೆದು ಮಗನನ್ನು ಹೊರಗೆ ಕರೆತಂದರು.
ಶಾಲೆಯನ್ನು ಬಿಡುವಾಗ ಶಿಕ್ಷಕರು ಒಮ್ಮೆ ಶಾಲೆಯನ್ನು ಪರಿಶೀಲಿಸಬೇಕು ಇಲ್ಲವಾದಲ್ಲಿ ಇಂಥಾ ಘಟನೆಗಳು ನಡೆಯುತ್ತವೆ ಎಂದು ಸ್ಥಳೀಯರು ಶಾಲೆಯ ಮುಖ್ಯೋಪಧ್ಯಾಯರಿಗೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್)