

ಬೆಂಗಳೂರು: ಮಾಗಡಿ ರಸ್ತೆ ಬ್ಯಾಡರಹಳ್ಳಿಯ ಬಿಜೆಪಿ ಮುಖಂಡ ಬಿ.ಪಿ. ಅನಂತರಾಜು ಆತ್ಮಹತ್ಯೆ ಪ್ರಕರಣ ಸಂಬಂಧ ಗುರುವಾರ ಮತ್ತೊಂದು ಆಡಿಯೋ ವೈರಲ್ ಆಗಿದ್ದು, ಕೇಸ್ಗೆ ಮತ್ತೊಂದು ತಿರುವು ಪಡೆದಿದೆ. ಇದು ಮೃತರ ಪತ್ನಿ ಬಿ.ಕೆ. ಸುಮಾ ಮತ್ತು ಪ್ರೇಯಸಿ ರೇಖಾ ನಡುವಿನ ಸಂಭಾಷಣೆ ಎನ್ನಲಾಗಿದ್ದು, ಸಾವಿಗೆ ಅನಾರೋಗ್ಯ ಕಾರಣ ಅಲ್ಲ, ಹನಿಟ್ರ್ಯಾಪ್ ಕೂಡ ಅಲ್ಲ. ಪತ್ನಿಯ ಟಾರ್ಚರ್ ಸಹಿಸಲಾಗದೇ ಅನಂತರಾಜು ಸತ್ತಿದ್ದಾರೆ ಎಂದು ಸ್ಥಳೀಯರಲ್ಲಿ ಗುಸುಗುಸು ಶುರುವಾಗಿದೆ.
ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಂತರಾಜು, ಮೇ 12ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಥೈರಾಯಿಡ್ ಸಮಸ್ಯೆಯಿಂದ ಸಾವಿನ ನಿರ್ಧರಕ್ಕೆ ಬಂದಿದ್ದಾರೆ ಎಂದು ಮೊದಲು ದೂರು ನೀಡಲಾಗಿತ್ತು. ಆನಂತರ ಪತ್ನಿ ಸುಮಾ, ನನ್ನ ಗಂಡನನ್ನು ಹನಿಟ್ರ್ಯಾಪ್ ಮಾಡಿ ಕೊಂದಿದ್ದಾರೆ. ಕೆ.ಆರ್. ಪುರದ ರೇಖಾ, ಈಕೆಯ ಪತಿ ವಿನೋದ್ ಮತ್ತು ಸ್ನೇಹಿತೆ ಸ್ಪಂದನಾಳ ಕಿರುಕುಳ ಸಹಿಸಲಾಗದೆ ನನ್ನ ಗಂಡ ಸತ್ತಿದ್ದಾರೆ ಎಂದು ದೂರು ನೀಡಿದ್ದರು. ಇದರ ಆಧಾರದ ಮೇಲೆ ರೇಖಾಳನ್ನು ಪೊಲೀಸರು ಬಂಧಿಸಿದ್ದರು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಬುಧವಾರ ಆಡಿಯೋವೊಂದು ವೈರಲ್ ಆಗಿತ್ತು. ‘ನಾನೇ ಅನಂತರಾಜುಗೆ ಟಾರ್ಚರ್ ಕೊಟ್ಟು ಸಾಯ್ತೀನಿ. ನಾನು ಕೊಡೋ ಟಾರ್ಚರ್ಗೆ ಹಾರ್ಟ್ಅಟ್ಯಾಕ್ ಆಗಿ ಅವನು ಸಾಯ್ಬೇಕು' ಎಂದು ಫೋನ್ನಲ್ಲಿ ರೇಖಾಗೆ ಸುಮಾ ಆಕ್ರೋಶದಿಂದ ಹೇಳುತ್ತಾ ಗಂಡನಿಗೆ ಬೈಯ್ಯುತ್ತಾ ಹೊಡೆಯುತ್ತಿದ್ದ ಹಿನ್ನೆಲೆ ಈ ಆಡಿಯೋದಲ್ಲಿತ್ತು. 'ಪ್ಲೀಸ್ ಸುಮಾ… ಅವರಿಗೆ ಏನೂ ಮಾಡ್ಬೇಡ ಸುಮಾ, ನಿನ್ನ ಕಾಲು ಹಿಡ್ಕೋತೀನಿ ಸುಮಾ, ಐ ವೆರಿ ಸಾರಿ ಸುಮಾ, ನಾನು ದೂರ ಇರ್ತೀನಿ. ಪ್ಲೀಸ್ ಸುಮಾ ಅವರಿಗೆ ಏನು ಮಾಡ್ಬೇಡ' ಎಂದು ರೇಖಾ ಕಣ್ಣೀರು ಹಾಕುತ್ತಾ ಗೋಗರೆದರೂ ಸುಮಾ, 'ಅವನು ಸಾಯಬೇಕು' ಎನ್ನುವುದು ಆಡಿಯೋದಲ್ಲಿದೆ. ಇದರ ಬೆನ್ನಲ್ಲೇ 2ನೇ ಆಡಿಯೋ ವೈರಲ್ ಆಗಿದ್ದು, ಇದು ಕೂಡ ಅನಂತರಾಜ್ ಪತ್ನಿ ಸುಮಾ ಮತ್ತು ರೇಖಾ ನಡುವಿನ ಸಂಭಾಷಣೆ ಎನ್ನಲಾಗಿದೆ.
2ನೇ ಆಡಿಯೋದಲ್ಲಿ ಏನಿದೆ?: ಅನಂತರಾಜ್ಗೆ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ನಡೆಸಿರುವುದು ಕೇಳಿಬಂದಿದೆ. ಅನಂತ್ಗೆ ಯಾವುದೇ ಕಿರುಕುಳ ಕೊಡಬೇಡ. ನನಗೆ ಕೊಡು ನಾನು ದೂರ ಆಗುತ್ತೇನೆ ಎಂದು ರೇಖಾ ಗೋಗರೆಯುತ್ತಾಳೆ. ಇದಕ್ಕೆ ಅನಂತರಾಜು ಪತ್ನಿ, ಈಗಾಗಲೇ ಕೈ ಮುರಿದು, ಎದೆಗೆ ಹಲ್ಲೆ ನಡೆಸಿ ಆಸ್ಪತ್ರೆಗೆ ಸೇರಿಸಿದ್ದೆ. ಬೇಕಾದರೆ ವಾರ್ಡ್ನ ಜನರನ್ನು ಕೇಳು. ನಂಬಿಕೆ ಇಲ್ಲವಾದರೆ, ವಿಡಿಯೋ ಕಾಲ್ ಮಾಡಿ ಮಾತನಾಡು ಎಂದು ಸುಮಾ, ಹೇಳುವ ಮಾತುಗಳು ಕೇಳಿಬಂದಿವೆ. ಸ್ಥಳೀಯರಲ್ಲಿ ಪತ್ನಿ ಕಿರುಕುಳಕ್ಕೆ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿವೆ. ಪೊಲೀಸರು ಸಹ ಗಂಭೀರವಾಗಿ ಪರಿಗಣಿಸಿದ್ದು, ಆಡಿಯೋ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.