

ರಾಮನಗರ: ಇಂದು ರಾಷ್ಟ್ರೀಯ ರೈತ ದಿನ. ಈ ದಿನವೇ ರೈತರೊಬ್ಬರ ಮೇಲೆ ದಲ್ಲಾಳಿಗಳು ಮನಸೋಇಚ್ಛೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ರಾಜಧಾನಿಯ ಕೂಗಳತೆ ದೂರದಲ್ಲೇ ಸಂಭವಿಸಿದೆ.
ರಾಮನನಗರದ ಕೈಲಾಂಚ ಹೋಬಳಿಯ ಅಂಜನಾಪುರ ಗ್ರಾಮದ ರೈತ ಬಸವರಾಜು ತೆಂಗಿನ ಕಾಯಿ ಮಾರಲೆಂದು ಗುರುವಾರ ಬೆಳಗ್ಗೆ ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದರು. ಈ ವೇಳೆ ಹೊರಗಿನಿಂದ ಬಂದ ಆರೇಳು ಜನ ದಲ್ಲಾಳಿಗಳು ರೈತನೊಂದಿಗೆ ಜಗಳ ತೆಗೆದು ಮನಸೋಇಚ್ಛೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ. ರೈತ ಬಸವರಾಜು ಮೇಲಿನ ಹಲ್ಲೆ ನೋಡಿ ರಕ್ಷಣೆಗೆ ಬಂದ ಬಂದ ಆತನ ಸಂಬಂಧಿ ವಿರೇಶ್ ಎಂಬುವವರ ಮೇಲೂ ದಲ್ಲಾಳಿಗಳು ಹಲ್ಲೆ ನಡೆಸಿದ್ದಾರೆ.
ಹಲ್ಲೆ ವಿಷಯ ತಿಳಿದ ಐಜೂರು ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ರಾಮನಗರದ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈತ ಕ್ಯಾನ್ಸರ್ ರೋಗಿಯಾಗಿದ್ದು, ಹಲ್ಲೆಯಿಂದ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ನೋಂದಾಯಿತ ದಲ್ಲಾಳಿಗಳಲ್ಲದ ಇವರು ಆಗಾಗ್ಗೆ ಮಾರುಕಟ್ಟೆಗೆ ಬಂದು ರೈತರಿಂದ ತರಕಾರಿ ಖರೀದಿಸಿ ಗ್ರಾಮಗಳಲ್ಲಿ ಲಗೇಜ್ ಆಟೋಗಳಲ್ಲಿ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ.
ರೈತರ ಮೇಲೆ ಹಲ್ಲೆ ಮಾಡಿರುವುದು ರಾಮನಗರದ ಎಪಿಎಂಸಿ ಮಾರುಕಟ್ಟೆಗೆ ಕಪ್ಪುಚುಕ್ಕೆ. ಅನಧಿಕೃತವಾಗಿ ವ್ಯವಹಾರ ನಡೆಸುತ್ತಿರುವ ದಲ್ಲಾಳಿಗಳಿಗೆ ನಿರ್ಬಂಧ ವಿಧಿಸುವ ಮೂಲಕ ಅಹಿತಕರ ಘಟನೆಗಳು ನಡೆಯದಂತೆ ಎಪಿಎಂಸಿ ಅಧಿಕಾರಿಗಳು ಮತ್ತು ವರ್ತಕರು ತಡೆಯಬೇಕು. ರೈತನ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ ವಿಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.