

ಕಲಬುರಗಿ: ಮನೆಗಳ್ಳತ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಒಂದೇ ಕುಟುಂಬದ 9 ಮಂದಿ ಪೈಕಿ 7 ಜನರನ್ನು ಕಲಬುರಗಿ ಚೌಕ್ ಪೊಲೀಸರು ಬಂಧಿಸಿದ್ದು, ಮತ್ತಿಬ್ಬರ ಪತ್ತೆಗೆ ಬಲೆ ಬೀಸಿದ್ದಾರೆ.
ಕಲಾವತಿ, ಗಣೇಶ್, ಶ್ರವಣ್, ರಘು, ಲಾಲು, ರತನ, ಶಿವಾ ಬಂಧಿತರು. ಈ ಗ್ಯಾಂಗ್ನ ಕಲಾವತಿ ಬೆಳಗ್ಗೆ ವೇಳೆ ಬಲೂನ್ ಮಾರಾಟ ನೆಪದಲ್ಲಿ ಬೀದಿಮೇಲೆ ಬರುತ್ತಿದ್ದಳು. ಅಲ್ಲಿ ಯಾವ ಮನೆಗೆ ಕನ್ನ ಹಾಕಬೇಕೆಂದು ಈ ವೃದ್ಧೆ ಕಲಾವತಿಯೇ ಸ್ಕೆಚ್ ಹಾಕುತ್ತಿದ್ದಳು. ಅದರಂತೆ ಆ ಸಂಜೆ ಇಲ್ಲವೇ ರಾತ್ರಿ ಮಹಿಳೆಯ ಮಕ್ಕಳು, ಅಣ್ಣ ಮತ್ತು ತಮ್ಮನ ಮಕ್ಕಳು ಕಳ್ಳತನ ಮಾಡಿಕೊಂಡು ಬರುತ್ತಿದ್ದರು. ಕಲಬುರಗಿ ನಗರದ ವಿವಿಧಡೆ ಈ ಖತರ್ನಾಕ್ ಗ್ಯಾಂಗ್ ಕಳ್ಳತನ ಮಾಡಿದೆ.
ಕದ್ದ ದುಡ್ಡಲ್ಲೇ ಇನ್ನೋವಾ ಕಾರು, ಪೋರ್ಡ್ ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಕಲಬುರಗಿ ಚೌಕ್ ಪೊಲೀಸರು ಒಂದೇ ಕುಟುಂಬದ ಏಳು ಜನರ ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳು ಕಲಬುರಗಿಯ ಸಾವಳಗಿ ಮತ್ತು ಸುಲ್ತಾನಪುರದಲ್ಲಿ ವಾಸವಿದ್ದರು. ಬಂಧಿತರಿಂದ 163 ಗ್ರಾಂ ಚಿನ್ನಾಭರಣ, 2 ಪಲ್ಸರ್ ಬೈಕ್, ಇನ್ನೋವಾ ಕಾರು, ಪೋರ್ಡ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.