

ಅಹಮದಾಬಾದ್: ತುಂಬಾ ವಯಸ್ಸಾದ ಬಳಿಕ ಬಹುತೇಕರು ಹಾಸಿಗೆಯಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ಕೆಲಸದಿಂದ ನಿವೃತ್ತಿ ಹೊಂದಿ ಮುಂದಿನ ಜೀವನವನ್ನು ವಿಶ್ರಾಂತಿಗೆ ಮೀಸಲಿಡುವ ಕಾಲದಲ್ಲಿ ಗುಜರಾತಿನ 62 ವರ್ಷದ ಹಿರಿಯ ಮಹಿಳೆ ಹಾಲು ಕರೆದು ವರ್ಷಕ್ಕೆ ಒಂದು ಕೋಟಿ ರೂ. ಸಂಪಾದಿಸುವ ಮೂಲಕ ವಯಸ್ಸಿಗೆ ಸೆಡ್ಡು ಹೊಡೆದಿದ್ದಾರೆ.
ವಯಸ್ಸಾದವರಿಂದ ಏನು ಸಾಧ್ಯ ಎಂದು ಪ್ರಶ್ನಿಸುವವರಿಗೆ ಉತ್ತರವಾಗಿ ನಿಂತಿರುವ ಹಿರಿಯ ಮಹಿಳೆ ಆದಾಯ ವರ್ಷದಿಂದ ವರ್ಷಕ್ಕೆ ಕೋಟಿ ಕೋಟಿ ಹೆಚ್ಚಾಗುತ್ತಿದೆ. ಎಮ್ಮೆ ಮತ್ತು ಹಸುಗಳನ್ನು ಸಾಕಿ ಸಲುಹುವ ಕಾಯಕ ಮಾಡುತ್ತಿರುವ ಮಹಿಳೆ, ಅಷ್ಟೇ ಫಲವನ್ನು ಕಾಣುತ್ತಿದ್ದಾರೆ. ಅಚ್ಚರಿಯೆಂದರೆ ಅವರ ನಾಲ್ಕು ಮಕ್ಕಳ ಆದಾಯ ಮಹಿಳೆದ ಆದಾಯದ ಅರ್ಧದಷ್ಟು ಇಲ್ಲ.
ಅಂದಹಾಗೆ ಮಹಿಳೆಯ ಹೆಸರು ನವಲ್ಬೆನ್ ದಾಲ್ಸಂಗಭಾಯಿ ಚೌಧರಿ. 2020ನೇ ವರ್ಷದಲ್ಲಿ ಗುಜರಾತ್ ರಾಜ್ಯದಲ್ಲಿ ಹಾಲಿನ ಕ್ರಾಂತಿಯನ್ನೇ ಉಂಟುಮಾಡಿದ್ದಾರೆ. ಬನಸ್ಕಂತ ಜಿಲ್ಲೆಯ ನಾಗನಾ ಗ್ರಾಮದ ನಿವಾಸಿಯಾದ ನವಲ್ಬೆನ್, ತಮ್ಮ ಜಿಲ್ಲೆಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದಾರೆ. 2019ರಲ್ಲಿ ಕೆಲವು ಸಣ್ಣ ಎಮ್ಮೆಗಳು ಮತ್ತು ಹಸುಗಳಿಂದ ಡೈರಿ ಆರಂಭಿಸಿದ ನವಲ್ಬೆನ್ ಕಠಿಣ ಪರಿಶ್ರಮದಿಂದ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಸದ್ಯ 80 ಎಮ್ಮೆ ಮತ್ತು 40 ಹಸುಗಳನ್ನು ಹೊಂದಿರುವ ಆಕೆ ಗ್ರಾಮದ ಸುತ್ತಾಮುತ್ತ ಅನೇಕ ಪ್ರದೇಶಗಳಿಗೆ ಹಾಲು ಸರಬರಾಜು ಮಾಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ನವಲ್ಬೆನ್, ಕೆಲವೇ ಕೆಲವು ಎಮ್ಮೆ ಮತ್ತು ಹಸುಗಳಿಂದ ಡೈರಿ ಆರಂಭಿದ ಡೈರಿಯಿಂದ ನಾನು ಖುಷಿಯಾಗಿದ್ದೇನೆ. ಈ ಡೈರಿ ವ್ಯವಹಾರದಿಂದ 2019ರಲ್ಲಿ 87.95 ಲಕ್ಷ ರೂ. ವ್ಯವಹಾರ ಮಾಡಿದ್ದೆ. 2020ರಲ್ಲಿ 1.10 ಕೋಟಿ ರೂ. ಆದಾಯ ಗಳಿಸಿದ್ದೇನೆ. ನಮ್ಮ ಜಿಲ್ಲೆಯಲ್ಲೇ ನಮ್ಮದು ನಂಬರ್ 1 ಡೈರಿ ಬಿಸಿನೆಸ್ ಎಂಬ ಹೆಮ್ಮೆ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ದಿನ ಕಳೆದಂತೆ ಡೈರಿ ಬಿಸಿನೆಸ್ ವೃದ್ಧಿಯಾಗುತ್ತಿದ್ದು, ನವಲ್ಬೆನ್ ಕೆಲವರ ಪಾಲಿನ ಉದ್ಯೋಗದಾತೆಯಾಗಿದ್ದಾರೆ. ಪ್ರಸ್ತುತ ಅವರ ಡೈರಿಯಲ್ಲಿ 15 ಮಂದಿ ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ ಪ್ರತಿದಿನ ಬೆಳಗ್ಗೆ ತಾವೇ ಪ್ರತಿ ಜಾನುವಾರುಗಳಿಗೆ ಹುಲ್ಲು ಮತ್ತು ನೀರನ್ನು ನೀಡುವ ಮೂಲಕ ಜಾನುವಾರಗಳ ಮೇಲೆ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ತಮ್ಮ ಅದ್ಭುತ ಸಾಧನೆಗೆ ಎರಡು ಲಕ್ಷ್ಮೀ ಪ್ರಶಸ್ತಿ ಮತ್ತು ಮೂರು ಉತ್ತಮ ಪುಷ್ಪಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಓದಿನ ನಂತರ ಉದ್ಯೋಗಕ್ಕಾಗಿ ಅಲೆಯುವ ಲಕ್ಷಾಂತರ ಯುವಕ-ಯುವತಿಯರಿಗೆ ಮಾದರಿಯಾಗಿರುವ ನವಲ್ಬೆನ್, ಸ್ವಂತ ಬಿಸಿನೆಸ್ನಿಂದ ಯಶಸ್ಸು ಸಾಧಿಸಿ ದೇಶದ ಅಭಿವೃದ್ಧಿಗೆ ತಮ್ಮದೇ ಕೊಡುಗೆಯನ್ನು ನೀಡಬಹುದು ಎಂಬುದನ್ನು ಸಾರಿದ್ದಾರೆ. ತಮ್ಮ ಮಕ್ಕಳ ಆದಾಯದ ಎರಡು ಪಟ್ಟು ಹೆಚ್ಚು ಸಂಪಾದಿಸುವ ಮೂಲಕ ಇಚ್ಛಾಶಕ್ತಿ ಇದ್ದರೆ ವಯಸ್ಸಿನ ಮಾತೇ ಇಲ್ಲ ಎಂಬುದು ಸಾಬೀತು ಮಾಡಿ ಮಾದರಿಯಾಗಿದ್ದಾರೆ. (ಏಜೆನ್ಸೀಸ್)