

ನಗೋಯಾ: ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು, ಉದಯೋನ್ಮುಖ ತಾರೆ ಉನ್ನತಿ ಹೂಡಾ ಜತೆಗೆ ಗಾಯತ್ರಿ ಗೋಪಿಚಂದ್ ಮತ್ತು ತ್ರೀಸಾ ಜೋಲಿ ಜೋಡಿ ಏಷ್ಯಾಡ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ 8ರ ಘಟ್ಟಕ್ಕೇರಿದರು. ಪುರಷರ ಸಿಂಗಲ್ಸ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಪದಕ ವಂಚಿತ ಲಕ್ಷ್ಯ ಸೇನ್ 2ನೇ ಮತ್ತು ಕನ್ನಡಿಗ ಆಯುಷ್ ಶೆಟ್ಟಿ 3ನೇ ಸುತ್ತಿನಲ್ಲೇ ಹೊರಬಿದ್ದರು.
ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿನಲ್ಲಿ ಪಿವಿ ಸಿಂಧು 21-19, 21-14 ನೇರ ಗೇಮ್‌ಗಳಿಂದ ಚೀನಾ ತೈಪೆಯ ಚಿಯು ಪಿನ್ ಚೈನ್ ಎದುರು ಗೆದ್ದು, ಮೂರನೇ ಸುತ್ತಿಗೇರಿದರು. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸಿಂಧು, ಮುಂದಿನ ಸುತ್ತಿನಲ್ಲಿ ಜಪಾನ್‌ನ ಟೊಮೊಕ ಮಿಯಾ ಜಾಕಿ ಸವಾಲು ಎದುರಿಸಲಿದ್ದಾರೆ. 19 ವರ್ಷದ ಉನ್ನ ತಿ21-14, 20-22, 21-19 ಮೂರು ಗೇಮ್‌ಗಳ ಹೋರಾಟದಲ್ಲಿ ಮಲೇಷ್ಯಾದ ಲಿಂಗ್ ಚಿಂಗ್ ವಾಂಗ್ ಎದುರು ಗೆದ್ದು ಬೀಗಿದರು. ನಂತರ ಎರಡನೇ ಸುತ್ತಿನಲ್ಲಿ 21-19, 21-13 ನೇರ ಗೇಮ್‌ಗಳಿಂದ ವಿಶ್ವ ನಂ.6 ಇಂಡೋನೇಷ್ಯಾದ ಪುತ್ರಿ ಕುಸುಮಾ ವಾರ್ಧಿನಿಗೆ ಸೋಲಿನ ಆಘಾತ ನೀಡಿದ ಉನ್ನತ್ತಿ, ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಸೆಣಸಲಿದ್ದಾರೆ. ಡಬಲ್ಸ್‌ನಲ್ಲಿ ತ್ರಿಸಾ ಜೋಲಿ-ಗಾಯತ್ರಿ ಜೋಡಿ 24-22, 21-18 ರಿಂದ ವಿಶ್ವ ನಂ.3 ಜಪಾನ್‌ನ ಯುಕಿ ಪುಕುಶಿಮ-ಮಾಯಾ ಮಟ್ಸುಮೊಟೊ ಎದುರು ಜಯ ಸಾಧಿಸಿ, ಕ್ವಾರ್ಟರ್‌ಫೈನಲ್‌ಗೇರಿತು.
ಸೇನ್, ಆಯುಷ್‌ಗೆ ನಿರಾಸೆ
ಹಾಲಿ ಚಾಂಪಿಯನ್ ಸಾತ್ವಿಕ್-ಚಿರಾಗ್ ಶೆಟ್ಟಿ ಡಬಲ್ಸ್‌ನಲ್ಲಿ ಆಘಾತಕಾರಿ ನಿರ್ಗಮನ ನಂತರ ಪುರುಷರ ಸಿಂಗಲ್ಸ್‌ನಲ್ಲಿ ಪದಕ ಭರವಸೆ ಎನಿಸಿದ್ದ ಲಕ್ಷ್ಯಸೇನ್ ಹಾಗೂ ಆಯುಷ್ ಶೆಟ್ಟಿ ಪ್ರಿ ಕ್ವಾರ್ಟರ್‌ೈನಲ್‌ನಲ್ಲಿ ನಿರಾಸೆ ಕಂಡರು. ಮೊದಲ ಸುತ್ತಿನಲ್ಲಿಬೈ ಪಡೆದಿದ್ದ ಆರಂಭಿಕ ಸುತ್ತಿನಲ್ಲಿ ಕಜಾಕಿಸ್ತಾನ ಮಕ್ಸುತ್ ತಜಿಬುಲ್ಲಾಯೆವ್ ಎದುರು 21-7, 21-7 ರಿಂದ ಸುಲಭ ಗೆಲುವು ದಾಖಲಿಸಿದ ಆಯುಷ್ ಶೆಟ್ಟಿ 3ನೇ ಸುತ್ತಿನಲ್ಲಿ 16-21, 21-19, 17-21ರಿಂದ ಚೀನಾ ತೈಪೆಯ ಚೌ ಟಿನ್ ಚೆನ್ ಎದುರು ಪರಾಭವಗೊಂಡರು. ಲಕ್ಷ್ಯಸೇನ್ 12-21, 21-15, 14-21 ರಿಂದ ಮಾಜಿ ವಿಶ್ವ ಚಾಂಪಿಯನ್ ಲೊಹ್ ಕೀನ್ ಯಿವ್ ಎದುರು ಸೋತರು.