ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಕಂಬೈನ್ಡ್ ಮೆಡಿಕಲ್ ಸರ್ವೀಸ್ ಪರೀಕ್ಷೆಗಾಗಿ ಅಧಿಸೂಚನೆ ಹೊರಡಿಸುವುದನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದೆ.
ಯುಪಿಎಸ್ಸಿಯ ನಿಗದಿತ ವೇಳಾಪಟ್ಟಿಯಂತೆ ಏಪ್ರಿಲ್ 8ರಂದು ಅಧಿಸೂಚನೆ ಹೊರಡಿಸಬೇಕಾಗಿತ್ತು. ಅರ್ಜಿ ಸಲ್ಲಿಸಲು ಏಪ್ರಿಲ್ 28 ಕೊನೆಯ ದಿನವಾಗಿತ್ತು. ಆದರೆ, ದೇಶಾದ್ಯಂತ ಲಾಕ್ಡೌನ್ ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸುವುದನ್ನು ಮುಂದಕ್ಕೆ ಹಾಕಿದೆ.
ಯುಪಿಎಸ್ಸಿ ಈಗಾಗಲೇ ರಾಷ್ಟ್ರೀಯ ಸೇನಾ ಅಕಾಡೆಮಿ ಹಾಗೂ ನೌಕಾ ಅಕಾಡೆಮಿ ಪ್ರವೇಶಕ್ಕೆ ಅಧಿಸೂಚನೆ ಹೊರಡಿಸುವುದನ್ನು ಮುಂದೂಡಿದೆ. ಇದಲ್ಲದೇ, ಹಲವು ನೇರ ನೇಮಕಾತಿಗಳನ್ನು ಸ್ಥಗಿತಗೊಳಿಸಿದೆ. ಅಖಿಲ ಭಾರತ ನಾಗರಿಕ ಸೇವಾ ಹುದ್ದೆಗಳ ಭರ್ತಿಗಾಗಿ ಚಾಲ್ತಿಯಲ್ಲಿದ್ದ ಸಂದರ್ಶನವನ್ನು ನಿಲ್ಲಿಸಿದೆ.
ಯುಪಿಎಸ್ಸಿ ವಾರ್ಷಿಕ ವೇಳಾಪಟ್ಟಿಯನ್ವಯ ಏಪ್ರಿಲ್ 22ರಂದು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಅಸಿಸ್ಟೆಂಟ್ ಕಮಾಡೆಂಟ್ ನೇಮಕಕ್ಕೆ ಅಧಿಸೂಚನೆ ಪ್ರಕಟಗೊಳ್ಳಬೇಕಿದೆ. ಇದನ್ನು ಮುಂದೂಡುವ ಸಾಧ್ಯತೆ ಅಧಿಕವಾಗಿದೆ. (ಏಜೆನ್ಸೀಸ್)