ಬಾರಾಬಂಕಿಯಲ್ಲಿ ಪ್ರವಾಸೀ ಬಸ್​​ಗೆ ಟ್ರಕ್​ ಡಿಕ್ಕಿ: 9 ಸಾವು, 27 ಮಂದಿಗೆ ಗಾಯ

bus
Published on

ಲಖನೌ: ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಇಂದು ಬೆಳಗಿನ ಜಾವ ಟ್ರಕ್ ಮತ್ತು ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ 9 ಜನರು ಸಾವನ್ನಪ್ಪಿದ್ದು, 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಿ ಬಸ್​ ಒಂದು ದೇವ ಕೋತ್ವಾಲಿ ಪ್ರದೇಶದ ಬಾಬುರಿ ಗ್ರಾಮದ ಬಳಿ ತಲುಪಿದಾಗ ಎದುರು ದಿಕ್ಕಿನಿಂದ ಬರುತ್ತಿದ್ದ ಟ್ರಕ್​ ಏಕಾಏಕಿ ಬಂದು ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿತು ಎನ್ನಲಾಗಿದೆ.

ಹಲವು ಪ್ರಯಾಣಿಕರು ತುಂಬಿದ್ದ ಬಸ್​ ದೆಹಲಿಯಿಂದ ಯುಪಿಯ ಬಹ್ರೈಚ್​ಗೆ ಹೋಗುತ್ತಿತ್ತು. ಎರಡೂ ವಾಹನಗಳು ಅತಿವೇಗವಾಗಿ ಸಾಗುತ್ತಿದ್ದುದರಿಂದ ಡಿಕ್ಕಿ ಹೊಡೆದ ಪರಿಣಾಮ ವಾಹನಗಳ ಮುಂಭಾಗಗಳು ನಜ್ಜುಗುಜ್ಜಾದವು. ಸ್ಥಳಕ್ಕೆ ತಲುಪಿದ ಪೊಲೀಸರು ಮತ್ತು ರಕ್ಷಣಾ ತಂಡಗಳು ಗಾಯಗೊಂಡ ಜನರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಗಂಭೀರವಾಗಿ ಗಾಯಗೊಂಡವರನ್ನು ರಾಜಧಾನಿ ಲಖನೌನ ಕೆಜಿಎಂಯು ಆಘಾತ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ, ಉಳಿದವರು ಬಾರಾಬಂಕಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದರ್ಶ್ ಸಿಂಗ್ ಹೇಳಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಅಪಘಾತದಲ್ಲಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net