Lakhimpur Kheri Case: ಎಷ್ಟು ಜನರನ್ನು ಬಂಧಿಸಿದ್ದೀರಿ ನಾಳೆ ವರದಿ ಕೊಡಿ, ಯುಪಿ ಸರ್ಕಾರಕ್ಕೆ ಸುಪ್ರೀಂ ತಾಕೀತು

Lakhimpur
Published on

ನವದೆಹಲಿ: ಲಖಿಂಪುರ್​ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್​ ಇದುವರೆಗೂ ಎಷ್ಟು ಜನರನ್ನು ಬಂಧಿಸಿದ್ದೀರಿ? ಎಂದು ಪ್ರಶ್ನಿಸಿದ್ದು, ನಾಳೆ ಪ್ರಕರಣ ಸಂಬಂಧ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಲಖಿಂಪುರ್​ ಖೇರಿ ಘಟನೆ ಸಂಬಂಧ ಕ್ರಮ ತೆಗೆದುಕೊಳ್ಳಲು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಉನ್ನತ ನ್ಯಾಯಾಲಯ ಇಂದು ನಡೆಸಿತು.

ಕಳೆದ ಭಾನುವಾರ ಕೇಂದ್ರ ಸಚಿವ ಅಜಯ್​ ಮಿಶ್ರಾ ಅವರು ಲಖಿಂಪುರ್​ಗೆ ಭೇಟಿ ನೀಡಿದ್ದ ವೇಳೆ ಪ್ರತಿಭಟನಾ ನಿರತ ರೈತರ ಮೇಲೆ ನಡೆದಿದ್ದ ದೌರ್ಜನ್ಯದಲ್ಲಿ ರೈತರು ಸೇರಿದಂತೆ 8 ಮಂದಿಯ ಪ್ರಾಣ ಹೋಗಿದೆ. ಈ ಪ್ರಕರಣದಲ್ಲಿ ಇದುವರೆಗೂ ಎಷ್ಟು ಮಂದಿಯನ್ನು ಬಂಧಿಸಿದ್ದೀರಿ ಎಂದು ಪ್ರಶ್ನಿಸಿರುವ ಸುಪ್ರೀಂಕೋರ್ಟ್​ ನಾಳೆ ವರದಿ ಸಲ್ಲಿಸುವಂತೆ ಕೇಳಿದೆ.

ರೈತರು, ಪತ್ರಕರ್ತರು ಸೇರಿದಂತೆ ಕೊಲ್ಲಲ್ಪಟ್ಟ ಎಂಟು ವ್ಯಕ್ತಿಗಳ ಬಗ್ಗೆಯೂ ವರದಿಯಲ್ಲಿ ನಮಗೆ ತಿಳಿಸಿ. ಇದು ನಿಜಕ್ಕೂ ದುರಾದೃಷ್ಟಕರ ಘಟನೆ. ನೀವು ಯಾರ ವಿರುದ್ಧ ಎಫ್ಐಆರ್ ದಾಖಲಿಸಿದ್ದೀರಿ ಮತ್ತು ನೀವು ಎಷ್ಟು ಜನರನ್ನು ಬಂಧಿಸಿದ್ದೀರಿ ಎಂಬುದನ್ನು ತಿಳಿಸಿ ಎಂದು ಸುಪ್ರೀಂ ಕೋರ್ಟ್ ಕೇಳಿದೆ.

ಘಟನೆ ಹಿನ್ನೆಲೆ ಏನು?

ಭಾನುವಾರ ಲಖೀಂಪುರ್​ ಖೇರಿಯಲ್ಲಿ ರೈತರ ಗುಂಪೊಂದು ಕೇಂದ್ರ ಸಚಿವ ಅಜಯ್​ ಮಿಶ್ರ ಅವರ ಪುತ್ರ ಆಶಿಶ್​ ಮಿಶ್ರ ಅವರ ವಾಹನವನ್ನು ತಡೆದು ಪ್ರತಿಭಟನೆ ಮಾಡುವಾಗ ರೈತರ ಮೇಲೆ ಕಾರು ಹರಿಸಿರುವ ಆರೋಪ ಸಚಿವರ ಪುತ್ರರ ವಿರುದ್ಧ ಕೇಳಿಬಂದಿದೆ. ಈ ಘಟನೆಯಲ್ಲಿ ಸ್ಥಳದಲ್ಲೇ ನಾಲ್ವರು ರೈತರು ಮೃತಪಟ್ಟಿದ್ದಾರೆ. ಬಳಿಕ ಬಿಜೆಪಿ ಕಾರ್ಯಕರ್ತರು ಮತ್ತು ರೈತರ ನಡುವೆ ನಡೆದ ಘರ್ಷಣೆಯಲ್ಲಿ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net