

ಲಖನೌ: ವಿಲಕ್ಷಣಕಾರಿ ಘಟನೆಯೊಂದರಲ್ಲಿ 29ವರ್ಷಗಳ ಹಿಂದಿನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 83 ವರ್ಷದ ವ್ಯಕ್ತಿಯೊಬ್ಬರಿಗೆ ನೋಟಿಸ್ ನೀಡಿರುವ ಘಟನೆ ಉತ್ತರಪ್ರದೇಶದ ಬರೇಲಿಯ ಬಾರಾಬಂಕಿಲ್ಲಿ ನಡೆದಿದೆ.
ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ, ಅಚ್ಚನ್(83) ಅವರಿಗೆ ನೋಟಿಸ್ ನೀಡಲಾಗಿದೆ. ನಿವೃತ್ತಿಯಾಗಿ 28 ವರ್ಷಗಳ ಬಳಿಕ ಅಪಘಾತ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿರುವುದು ದೇಶದಲ್ಲಿನ ನ್ಯಾಯ ವ್ಯವಸ್ಥೆ ಕುರಿತು ಪ್ರಶ್ನಗಳು ಉದ್ಭವಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಚ್ಚನ್ 1994ರಲ್ಲಿ ಉತ್ತರಪ್ರದೇಶ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಫರೀದ್ಪುರದಿಂದ ಬರೇಲಿಯತ್ತ ಬರುವಾಗ ರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಎಮ್ಮೆ ಒಂದು ಮಲಗಿತ್ತು. ಕತ್ತಲಾಗಿದ್ದರಿಂದ ಅದನ್ನು ನೋಡದೆ ನಿಯಂತ್ರಣ ತಪ್ಪಿ ಗುದ್ದಿದ್ದ ಪರಿಣಾಮ ಸ್ಥಳದಲ್ಲೇ ಎಮ್ಮೆ ಮೃತಪಟ್ಟಿತ್ತು.
ಈ ಸಂಬಂಧ ನಾನು ಫರೀದ್ಪುರ ಪೊಲೀಸ್ ಠಾಣೆಗೆ ಖುದ್ದಾಘಿ ತೆರಳಿದೆ. ಎರಡು ಬಾರಿ ನೋಟಿಸ್ ನೀಡಲಾಗಿತ್ತು. ನಾನು ಸಹ ಅದಕ್ಕೆ ಉತ್ತರಿಸಿದ್ದೆ. ಪ್ರಕರಣ ಮುಗಿದು 29 ವರ್ಷಗಳ ಬಳಿಕ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಿರುವುದು ಆಶ್ವರ್ಯವನ್ನುಂಟು ಮಾಡಿದೆ ಎಂದು ಅಚ್ಚನ್ ಹೇಳಿದ್ಧಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು 29 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನೋಟಿಸ್ ನೀಡಿರುವುದು ಆಶ್ಚರ್ಯ ಎನ್ನಿಸಿದೆ. ಅಚ್ಚನ್ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಕಾನೂನಿನ ಪ್ರಕಾರ ಅವರನ್ನು ಬಂಧಿಸುವುದಿಲ್ಲ ಎಂದು ತಿಳಿಸಿದ್ಧಾರೆ.