ನಮ್ಮ ಕೆಲಸದ ಶೇ. 80 ಭಾಗ... ಜಾಲತಾಣದಲ್ಲಿ ಸಂಚಲನ ಮೂಡಿಸಿದ ಐಎಎಸ್ ಅಧಿಕಾರಿಯ ಪೋಸ್ಟ್​! IAS Work Culture ​

IAS Work Culture
Published on

IAS Work Culture: ಭಾರತೀಯ ಆಡಳಿತ ಸೇವೆಗಳ (ಐಎಎಸ್) ಅಧಿಕಾರಿಗಳು ತಮ್ಮ ಕೆಲಸದ ಶೇ. 80 ಕ್ಕಿಂತ ಹೆಚ್ಚು ಸಮಯವನ್ನು "ಮುಖ್ಯವಲ್ಲದ ಕೆಲಸ"ಗಳಲ್ಲಿಯೇ ಕಳೆಯುತ್ತಾರೆ ಎಂದು ರಾಜಸ್ಥಾನದ ಪ್ರಧಾನ ಕಾರ್ಯದರ್ಶಿ (ಇಂಧನ) ಅಜಿತಾಬ್ ಶರ್ಮ ಹೇಳಿದ್ದಾರೆ.

ಅಜಿತಾಬ್​ ಶರ್ಮ ತಮ್ಮ ಸುದೀರ್ಘ ಲಿಂಕ್​ಡಿನ್ ಪೋಸ್ಟ್​ನಲ್ಲಿ ಐಎಎಸ್​ ಕೆಲಸದ ಸಂಸ್ಕೃತಿಯ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್​ ಎಲ್ಲರ ಗಮನವನ್ನು ಸೆಳೆದಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಅಜಿತಾಬ್ ಶರ್ಮ ಅವರು ರಾಜಸ್ಥಾನ ಕೇಡರ್‌ನ 1996ರ ಬ್ಯಾಚ್‌ನ ಐಎಎಸ್ ಅಧಿಕಾರಿ. ರಾಜಸ್ಥಾನ ಸರ್ಕಾರದಲ್ಲಿ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಶರ್ಮ, ತಮ್ಮ ಅಧಿಕಾರ ವಾಪ್ತಿಯಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ತೆರೆದಿಟ್ಟಿದ್ದಾರೆ. ಆಡಳಿತದ ಪ್ರಮುಖ ಜವಾಬ್ದಾರಿಗಳನ್ನು ಬಿಟ್ಟು ತಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ದಿನನಿತ್ಯದ ಕಾರ್ಯಗಳ ಮೇಲೆ ಅತಿಯಾದ ಗಮನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ನಮ್ಮ ಕೆಲಸದಲ್ಲಿ ಶೇ. 80 ಕ್ಕಿಂತ ಹೆಚ್ಚು ಭಾಗವು ಇತರ ಎಲ್ಲಾ ಇಲಾಖೆಗಳು ಇರುವ ಸಾಮಾನ್ಯ ಸಭೆಗಳಿಗೆ ಹಾಜರಾಗುವುದು, ಮಾನವ ಸಂಪನ್ಮೂಲ ಸಮಸ್ಯೆಗಳನ್ನು ನಿರ್ವಹಿಸುವುದು, ಮೊಕದ್ದಮೆ ವಿಷಯಗಳಿಗೆ ಹಾಜರಾಗುವುದು, ಪಾರದರ್ಶಕತೆ ಮತ್ತು ಮಾಹಿತಿ ಹಕ್ಕು ಕಾನೂನುಗಳನ್ನು ನಿರ್ವಹಿಸುವುದು, ಸುದ್ದಿ ತುಣುಕುಗಳಿಗೆ ಪ್ರತ್ಯುತ್ತರಗಳನ್ನು ಕಳುಹಿಸುವುದು, ಸಾಮಾನ್ಯ ಪತ್ರವ್ಯವಹಾರಗಳಿಗೆ ಪ್ರತಿಕ್ರಿಯಿಸುವುದು ಮತ್ತು ಎಲ್ಲಾ ರೀತಿಯ ವರದಿಗಳನ್ನು ಸಂಗ್ರಹಿಸುವುದಕ್ಕೆ ಸಂಬಂಧಿಸಿದೆ ಎಂದು ಶರ್ಮ ಹೇಳಿದ್ದಾರೆ.

ಐಎಎಸ್‌ನೊಳಗಿನ ಎಲ್ಲ ಹುದ್ದೆಗಳು ಸಮಾನವಾಗಿ ಸವಾಲಿನವು ಎಂಬ ಆಡಳಿತ ವಲಯಗಳಲ್ಲಿನ ದೀರ್ಘಕಾಲದ ನಂಬಿಕೆಯನ್ನೇ ಶರ್ಮಾ ತಮ್ಮ ಪೋಸ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಎಲ್ಲ ಕೆಲಸದ ನಿಯೋಜನೆಗಳು ಒಂದೇ ರೀತಿಯ ಕಷ್ಟದ ಮಟ್ಟವನ್ನು ಹೊಂದಿವೆ ಎಂಬ ಚಿಂತನೆಯನ್ನು ನಾನು ಎಂದಿಗೂ ಮನವರಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಒಂದು ನಿರೂಪಣೆ ಬಹುಶಃ ನಾವು ಭಾಗವಾಗಿರುವ ಆಡಳಿತ ಸೇವೆಗಳ ಕಲ್ಪಿತ ಸಾಮಾನ್ಯ ಸ್ವರೂಪದಿಂದ ಹುಟ್ಟಿಕೊಂಡಿದೆ ಎಂದಿದ್ದಾರೆ.

ಇನ್ನು ಶರ್ಮಾ ಅವರು ಮುಖ್ಯವಾದ ಮತ್ತು ಮುಖ್ಯವಲ್ಲದ ಜವಾಬ್ದಾರಿಗಳ ನಡುವೆ ಸ್ಪಷ್ಟವಾದ ರೇಖೆಯನ್ನು ಎಳೆದಿದ್ದಾರೆ. ಮುಖ್ಯವಲ್ಲದ ಕೆಲಸಗಳಲ್ಲಿ ಸಭೆಗಳು, ಮೊಕದ್ದಮೆಗಳು ಮತ್ತು ದಿನನಿತ್ಯದ ಪತ್ರವ್ಯವಹಾರಗಳು ಸೇರಿವೆ. ಆದರೆ, ಅವರ ಪ್ರಕಾರ ಮುಖ್ಯವಾದ ಕೆಲಸವು ನೀರು, ಇಂಧನ, ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯದಂತಹ ನಿರ್ದಿಷ್ಟ ಇಲಾಖೆಗಳ ಧ್ಯೇಯ ಮತ್ತು ದೃಷ್ಟಿಕೋನದೊಂದಿಗೆ ಪ್ರಾಯೋಗಿಕವಾಗಿ ತೊಡಗಿಸಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಆದರೆ, ಇಲಾಖೆಯ ಪ್ರಮುಖ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುವುದೇ ನಿಜವಾದ ಸವಾಲು. ಸಂಸ್ಥೆ ಮತ್ತು ಸಮಾಜಕ್ಕೆ ನಾವು ನೀಡುವ ನಿಜವಾದ ಕೊಡುಗೆ ಇದೇ ಆಗಿದೆ ಎಂದು ಶರ್ಮ ಹೇಳಿದ್ದಾರೆ.

ಪ್ರಮುಖ ಇಲಾಖೆಯ ಕಾರ್ಯಗಳನ್ನು ನಿರಂತರವಾಗಿ ನಿರ್ಲಕ್ಷಿಸುವುದರಿಂದ ಹೊಸತನ ಸ್ಥಗಿತಗೊಳ್ಳುವುದಲ್ಲದೆ, ಅಂತಿಮವಾಗಿ ದೀರ್ಘಾವಧಿಯಲ್ಲಿ ಸೇವಾ ವಿತರಣೆಗೆ ಹಾನಿ ಮಾಡುತ್ತದೆ ಎಂದು ಶರ್ಮ ಎಚ್ಚರಿಸಿದ್ದಾರೆ. ಇಂಧನ ಇಲಾಖೆಯಲ್ಲಿ ತಮ್ಮ ಪಾತ್ರಕ್ಕೆ ಕಾಲಿಡುತ್ತಿದ್ದಂತೆ, ಪ್ರಸ್ತುತ ಮಾದರಿಯ ಕೆಲಸವನ್ನು ಬಿಟ್ಟು, ತಮ್ಮ ಸಮಯದ ಶೇ. 80 ರಷ್ಟು ಭಾಗವನ್ನು ಪ್ರಮುಖ ಕೆಲಸಗಳಿಗೆ ಮೀಸಲಿಡುವುದು ಅವರ ಸಂಕಲ್ಪವಾಗಿದೆ. ಇಂಧನ ಇಲಾಖೆಯು ಮೂಲಭೂತವಾಗಿ ಪ್ರಮುಖ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕಾದ ಸ್ಥಳಗಳಲ್ಲಿ ಒಂದಾಗಿದೆ ಎಂದು ಶರ್ಮ ಅವರು ಗಮನಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net