

pregnant: ಹದಿಹರೆಯದ 8 ತಿಂಗಳ ಗರ್ಭಿಣಿಯೊಬ್ಬಳು ಮನೆಯ ಟೆರಸ್ ಮೇಲಿಂದ ಬಿದ್ದು, ಸಾವನ್ನಪ್ಪಿರುವ ಘಟನೆ ದೆಹಲಿಯ ಪೂತ್ ಖುರ್ದ ಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
17 ವರ್ಷದ ಬಾಲಕಿ ತನ್ನ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದಳು. ಆಕೆಯ ಸಹೋದರಿ ಕೆಲಸಕ್ಕೆಂದು ಹೋದಾಗ ಟೆರಸ್ ಮೇಲಿಂದ ಬಿದ್ದು, ಗಂಭೀರಗಾಯಗೊಂಡಿದ್ದಳು. ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.
ಕಾರ್ಮಿಕ ಕೆಲಸ ಮಾಡುತ್ತಿದ್ದ ಪಿಂಕು ಎಂಬ ಯುವಕನೊಂದಿಗೆ ಈ ಬಾಲಕಿ ಲೀವ್-ಇನ್ ಸಂಬಂಧ ಹೊಂದಿದ್ದಳು. ಪಿಂಕು ಬಲವಂತವಾಗಿ ಬಾಲಕಿಯನ್ನು ತನ್ನೊಂದಿಗೆ ಇಟ್ಟುಕೊಳ್ಳುತ್ತಿದ್ದ, ಹಾಗೆ ಆಕೆಯ ಜೊತೆ ದೈಹಿಕ ಸಂಬಂಧ ಹೊಂದಿದ್ದನು. ಪಿಂಕು ಕಿರುಕುಳ ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಸಹೋದರಿ ಪೋಲಿಸರಿಗೆ ದೂರು ನೀಡಿದ್ದಾಳೆ. ಈ ಹಿನ್ನೆಲೆ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಹುಡುಗಿ ಹಾಗೂ ಆರೋಪಿ ಪಿಂಕು ಒಂದೇ ಗ್ರಾಮದ (ಪೂತ್ ಖುರ್ದ)ನಿವಾಸಿಗಳಾಗಿದ್ದರು. ಇವರ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳಿದ್ದು, ಪಿಂಕು ಆಕೆಯ ಮೇಲೆ ದೈಹಿಕವಾಗಿ ದೌರ್ಜಜ್ಯವೆಸಗುತ್ತಿದ್ದ. ಇನ್ನು ಆಕೆಯ ಪೋಷಕರು ಕೆಲ ದಿನಗಳ ಹಿಂದೆ ಬಾಲಕಿಯನ್ನು ತಮ್ಮ ಹಳ್ಳಿಗೆ ವಾಪಾಸ್ಸು ಕರೆದುಕೊಂಡು ಹೋಗಿದ್ದರು. ಆದರೆ, ಪಿಂಕು ಅವರ ಹಳ್ಳಿಗೆ ಹೋಗಿ ಆಕೆಯನ್ನು ತನ್ನೊಡನೆ ಕಳುಹಿಸಿ ಕೊಡುವಂತೆ ಮನವೊಲಿಸಿ ಆಕೆಯನ್ನು ದೆಹಲಿಗೆ ಕರೆದುಕೊಂಡು ಬಂದಿದ್ದಾನೆ. ಆನಂತರವೂ ಆಕೆಯ ಮೇಲೆ ದೌರ್ಜನ್ಯ ಮುಂದುವರೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ವರದಿ ಆಧಾರದ ಮೇಲೆ, ಪಿಂಕು ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 64(1) (ಅತ್ಯಾಚಾರಕ್ಕೆ ಶಿಕ್ಷೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದ ಸೆಕ್ಷನ್ 6ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಹರೇಸ್ವರ್ ಸ್ವಾಮಿ ಹೇಳಿದ್ದಾರೆ. (ಏಜೆನ್ಸೀಸ್)