

ಬೆಂಗಳೂರು: ನಟಿ ಪವಿತ್ರಾ ಗೌಡ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆದರೆ, ಈ ಬಾರಿ ಯಾವುದೇ ವಿವಾದಕ್ಕೆ ಪವಿತ್ರಾ ಗುರಿಯಾಗಿಲ್ಲ. ಬದಲಾಗಿ ಟ್ಯಾಟೂ ವಿಚಾರಕ್ಕೆ ಈ ಬಾರಿ ಸದ್ದು ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ನಟ ದರ್ಶನ್ ಅಭಿಮಾನಿಗಳ ಗಮನವನ್ನು ಸೆಳೆದಿದ್ದಾರೆ. ಅಷ್ಟಕ್ಕೂ ಪವಿತ್ರಾ ಅವರು ಗಮನ ಸೆಳೆಯುವಂತಹ ಕೆಲಸ ಏನು ಮಾಡಿದರು ಎಂಬುದನ್ನು ತಿಳಿಯೋಣ.
ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ನೀತು ವನಜಾಕ್ಷಿ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ದೊಡ್ಮನೆಯಲ್ಲಿ ಏಳು ವಾರಗಳನ್ನು ಕಳೆದು ಎಲಿಮಿನೇಟ್ ಆಗಿ ಹೊರಬಂದರು. ನೀತು ಈ ಹಿಂದೆ ಮಂಜುನಾಥ್ ಆಗಿದ್ದರು. ಲಿಂಗ ಬದಲಾವಣೆಯ ಬಳಿಕ ನೀತು ಆಗಿದ್ದಾರೆ. ಬೆಂಗಳೂರಿನಲ್ಲಿ ಟ್ಯಾಟೂ ಸ್ಟುಡಿಯೋ ನಡೆಸುತ್ತಿದ್ದಾರೆ. ಈ ಸ್ಟುಡಿಯೋಗೆ ಪವಿತ್ರಾ ಗೌಡ ಭೇಟಿ ನೀಡಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಪವಿತ್ರಾ ಗೌಡ ಮತ್ತು ನೀತು ವನಜಾಕ್ಷಿ ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಪವಿತ್ರಾ ಗೌಡ ಅವರ ಟ್ಯಾಟೂ ವಿಡಿಯೋ ನಟ ದರ್ಶನ್ ಅಭಿಮಾನಿಗಳ ಗಮನ ಸೆಳೆದಿದೆ. ಅಂದಹಾಗೆ ನಟ ದರ್ಶನ್ ಮತ್ತು ಪವಿತ್ರಾ ನಡುವೆ ಇರುವ ಸಂಬಂಧ ಎಂಥದ್ದು ಎಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ಈಗಾಗಲೇ ಇದು ಜಗಜ್ಜಾಹೀರಾಗಿದೆ. ತಾಜಾ ಸಂಗತಿ ಏನೆಂದರೆ ಪವಿತ್ರಾ ತಮ್ಮ ಕೈ ಮೇಲೆ 777 ಟ್ಯಾಟೂ ಹಾಕಿಸಿಕೊಂಡಿದ್ದಾರೆ ಮತ್ತು ಟ್ಯಾಟೂ ಪಕ್ಕದಲ್ಲಿ ಒಂದು ಲವ್ ಮಾರ್ಕ್ ಕೂಡ ಇದೆ. ಈ 777 ಗೂ ನಟ ದರ್ಶನ್ಗೂ ಲಿಂಕ್ ಇದೆ ಎಂದು ಅಭಿಮಾನಿಗಳು ಕಾಮೆಂಟ್ ಬಾಕ್ಸ್ನಲ್ಲಿ ಚರ್ಚಿಸುತ್ತಿದ್ದಾರೆ. ಅಲ್ಲದೆ, 777 ಅನ್ನು ಡಿಕೋಡ್ ಸಹ ಮಾಡಿದ್ದಾರೆ.
ಹಾಗಾದರೆ, 777 ಗೂ ದರ್ಶನ್ಗೂ ಏನು ಸಂಬಂಧ? ಒಬ್ಬೊಬ್ಬ ಅಭಿಮಾನಿಗಳು ಒಂದೊಂದು ಸಿದ್ಧಾಂತವನ್ನು ಪ್ರಸ್ತುತಪಡಿಸಿದ್ದಾರೆ. ದರ್ಶನ್ ಹುಟ್ಟಿದ್ದು 1977 ಮತ್ತು ಪವಿತ್ರಾ ಮಗಳು ಖುಷಿ ಹುಟ್ಟಿದ ದಿನ ನವೆಂಬರ್ 7 ಹೀಗಾಗಿ 777 ಟ್ಯಾಟೂ ಹಾಕಿಕೊಂಡಿದ್ದಾರೆ ಎಂದಿದ್ದಾರೆ. ದರ್ಶನ್ ಹುಟ್ಟಿದ ದಿನಾಂಕ 16 ಅಂದರೆ 1+6= 7 ಮತ್ತು ದರ್ಶನ್ ಎತ್ತರ 6.1 ಹೀಗಾಗಿ 777 ಟ್ಯಾಟೂ ಮೂಡಿದೆ ಎಂದಿದ್ದಾರೆ. ಇನ್ನು ಕೆಲವರು ದರ್ಶನ್ ಕಾರಿನ ನಂಬರ್ಗೆ ಹೋಲಿಕೆ ಮಾಡುತ್ತಿದ್ದಾರೆ.
ಇದೆಲ್ಲ ಒಂದೆಡೆಯಾದರೆ, ಪವಿತ್ರಾ ಗೌಡ ರೆಡ್ ಕಾರ್ಪೆಟ್ ಸ್ಟುಡಿಯೋ 777 ಹೆಸರಿನ ಫ್ಯಾಷನ್ ಬುಟಿಕ್ ಅನ್ನು ನಡೆಸುತ್ತಿದ್ದಾರೆ. ಇದರ ಮೂಲಕ ಸೆಲೆಬ್ರಿಟಿಗಳಿಗೆ ಹಾಗೂ ಜನಸಾಮಾನ್ಯರಿಗೆ ಉಡುಗೆಗಳನ್ನು ಮಾರಾಟ ಮಾಡುತ್ತಾರೆ. ಹೀಗಾಗಿ 777 ಟ್ಯಾಟೂ ಹಿಂದಿನ ಕಾರಣ ಇದು ಕೂಡ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಅಂದಹಾಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ನಟಿ ಪವಿತ್ರಾ ಗೌಡ ನಡುವೆ ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾ ವಾರ್ ನಡೆದಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ವಾಗ್ವಾದ ಮೊದಲ ಬಾರಿಗೆ ಬಹಿರಂಗವಾಗಿಯೇ ನಡೆಯಿತು. ಕಾಟೇರ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ನಟ ದರ್ಶನ್ಗೆ ಕೌಟುಂಬಿಕ ಕಲಹ ಕೊಂಚ ಇರಿಸು-ಮುರುಸು ಉಂಟು ಮಾಡಿತು.
ದರ್ಶನ್ ಮತ್ತು ಪವಿತ್ರಾ ವಿಚಾರ ಬಹುದಿನಗಳಿಂದಲೂ ಹರಿದಾಡುತ್ತಿತ್ತು. ಆದರೆ, ಕಳೆದು ತಿಂಗಳು ವಿಜಯಲಕ್ಷ್ಮೀ ತಮ್ಮ ಪುತ್ರ ಮತ್ತು ಪತಿ ದರ್ಶನ್ ಜತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡು, ಇದು ನಾವು, ನಮ್ಮದು ಮತ್ತು ನಮ್ಮದು ಮಾತ್ರ ಎಂದು ಬರೆದುಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಪವಿತ್ರಾ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಒಂದು ದಶಕ ಕಳೆಯಿತು ಮತ್ತು ಶಾಶ್ವತವಾಗಿ ಹೋಗುವುದು. ನಮ್ಮ ಸಂಬಂಧಕ್ಕೆ 10 ವರ್ಷಗಳಾಗಿವೆ. ಧನ್ಯವಾದಗಳು ಎಂದು ಬರೆದುಕೊಂಡಿದ್ದರು. ವಿಡಿಯೋದಲ್ಲಿ ದರ್ಶನ್ ಜತೆಗಿರುವ ಫೊಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ದೃಢಪಡಿಸುವ ಮೂಲಕ ವಿಜಯಲಕ್ಷ್ಮೀಗೆ ಟಾಂಗ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ಸಿಡಿದೆದ್ದ ವಿಜಯಲಕ್ಷ್ಮೀ, ಪವಿತ್ರಾ ಗೌಡಳ ಹಳೆಯ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟು ತಿರುಗೇಟು ನೀಡಿದರು. ಇಲ್ಲಿಯವರೆಗೂ ಪವಿತ್ರಾ ಬಗ್ಗೆ ಮಾತ್ರ ಜನರಿಗೆ ಗೊತ್ತಿತ್ತು. ಆದರೆ ಈಗ ಪವಿತ್ರಾಳ ಗಂಡನ ಫೋಟೋವನ್ನು ಸಹ ವಿಜಯಲಕ್ಷ್ಮೀ ಹಂಚಿಕೊಂಡಿದ್ದರು. ಅಲ್ಲದೆ ಪವಿತ್ರಾ ಗೌಡ ಹೆಸರನ್ನು ಉಲ್ಲೇಖಿಸಿಯೇ ವಿಜಯಲಕ್ಷ್ಮೀ ಸರಿಯಾಗಿ ತಿರುಗೇಟು ನೀಡಿ, ದೂರು ನೀಡುವುದಾಗಿಯೂ ಎಚ್ಚರಿಕೆ ನೀಡಿದ್ದರು. ಬಳಿಕ ಪವಿತ್ರಾ ಸಹ ಖಾಸಗಿ ಫೋಟೋಗಳನ್ನು ಹಂಚಿಕೊಂಡಿದ್ದಕ್ಕೆ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದರು. ಕೆಲವು ದಿನಗಳವರೆಗೆ ವಾದ-ವಿವಾದ ಮುಂದುವರಿದು, ಆಮೇಲೆ ಸುದ್ದಿ ತಣ್ಣಗಾಯಿತು.