

ಬೆಂಗಳೂರು: ಜನರ ಕಷ್ಟಗಳನ್ನು ಬಂಡವಾಳ ಮಾಡಿಕೊಂಡ ಗುಂಪುವೊಂದು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಪ್ರಚೋದನೆ ಮಾಡಿದೆ. ಈ ಆರೋಪದ ಮೇಲೆ ಪೊಲೀಸರು ಆರು ಮಂದಿಯನ್ನು ಬಂಧಿಸಿರುವ ಘಟನೆ ಶಿರಸಿಯಲ್ಲಿ ನಡೆದಿದೆ.
ಪರಮೇಶ್ವ ನಾಯ್ಕ್, ಸುನೀತಾ ನಾಯ್ಕ್, ಧನಂಜಯ್ ಶಿವಣ್ಣ, ಶಾಲಿನಿ ರಾಣಿ, ಕುಮಾರ ಲಮ್ಮಾಣಿ, ತಾರಾ ಲಮ್ಮಾಣಿ ಬಂಧಿತರು. ಸದ್ಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ನಡೆದಿದ್ದೇನು?: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಗಳಮನೆ ಗ್ರಾಮದ ಆದರ್ಶ ನಾಯ್ಕ ಎಂಬುವವರ ಮನೆಗೆ ಆರು ಜನರ ತಂಡವೊಂದು ಬಂದಿತ್ತು. ನಿಮ್ಮ ಆರ್ಥಿಕ ಪರಿಸ್ಥಿತಿ ಹಾಗೂ ಆರೋಗ್ಯ ಸರಿ ಆಗಬೇಕಾದರೆ ಕ್ರೈಸ್ತ್ ಧರ್ಮ ಸ್ವೀಕಾರ ಮಾಡಿ ಎಂದು ಹೇಳುತ್ತಾ ಈ ಗುಂಪು ಮನವೊಲಿಸುತ್ತಿದ್ದರು.
ಆದರ್ಶ ನಾಯ್ಕ ಎಂಬುವವರು ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿ ಆರು ಮಂದಿಯನ್ನು ಬಂಧಿಸಿದ್ದಾರೆ.