VIDEO| ಹೆದ್ದಾರಿಯಲ್ಲಿ ಏಕಾಏಕಿ ಯುಟರ್ನ್​ ಹೊಡೆದ ಲಾರಿ; ಒಂದೇ ಕುಟುಂಬದ ಆರು ಮಂದಿ ದುರ್ಮರಣ

Accident
Published on

ಜೈಪುರ: ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಲಾರಿಯೊಂದು ದಿಢೀರ್​ ಎಂದು ಯು-ಟರ್ನ್​ ಹೊಡೆದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅಪಘಾತದ ತೀವ್ರತೆಗೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮೃತರನ್ನು ಮನೀಷ್​ ಶರ್ಮಾ, ಕೈಲಾಶ್​ ಶರ್ಮಾ, ಸತೀಶ್​ ಶರ್ಮಾ, ಅನಿತಾ, ಸಂತೋಷ್​, ಪೂನಂ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವವರನ್ನು ಮನನ್​ ಹಾಗೂ ದೀಪಾಲಿ ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಲಾರಿಯ ಸಮೇತ ಚಾಲಕ ಪರಾರಿಯಾಗಿದ್ದು, ಈತನ ಹುಡುಕಾಟಕ್ಕೆ ವಿಶೇಷ ತಂಡವನ್ನು ರಚಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಮಾಯಿ ಮಾಧೋಪುರ್ ಜಿಲ್ಲೆಯ ಹೆಚ್ಚುವರಿ ಎಸ್​ಪಿ ದಿನೇಶ್ ಕುಮಾರ್ ಅಪಘಾತಕ್ಕೀಡಾದವರು ಸವಾಯಿ ಮಾಧೋಪುರದಲ್ಲಿರುವ ಗಣೇಶನ ದೇವಸ್ಥಾನಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಇವರು ಚಲಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿ ಚಾಲಕನನ್ನು ಗುರುತಿಸಲಾಗಿದ್ದು, ಆತನನ್ನು ಶೀಘ್ರ ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net