

ಕಾನ್ಪುರ: ಸರ್ಕಾರಿ ಆಶ್ರಯತಾಣದಲ್ಲಿ ವಾಸವಾಗಿದ್ದ 57 ಹೆಣ್ಣುಮಕ್ಕಳಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಉತ್ತರಪ್ರದೇಶದ ಕಾನ್ಪುರದಲ್ಲಿರುವ ಸರ್ಕಾರಿ ವಸತಿ ಗೃಹದಲ್ಲಿ ಕಳೆದವಾರ ಕರೊನಾ ಟೆಸ್ಟ್ ಮಾಡಿಸಲಾಗಿತ್ತು. ಅವರಲ್ಲಿ 57 ಹುಡುಗಿಯರು ಹಾಗೂ ಓರ್ವ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ.
57 ಹೆಣ್ಣುಮಕ್ಕಳನ್ನೂ ಕೊವಿಡ್-19 ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕರೊನಾ ಸೋಂಕಿಲ್ಲದ ಉಳಿದ ಹೆಣ್ಣುಮಕ್ಕಳನ್ನು ಮತ್ತು ವಸತಿಗೃಹದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಆದರೆ ಕರೊನಾ ಟೆಸ್ಟ್ ವೇಳೆ ಇನ್ನೊಂದು ಆತಂಕಕಾರಿ ವಿಷಯ ಹೊರಬಿದ್ದಿದೆ. 57 ಹೆಣ್ಣುಮಕ್ಕಳಲ್ಲಿ ಒಟ್ಟು ಐವರು ಗರ್ಭಿಣಿಯರಾಗಿದ್ದು, ಅವರಲ್ಲೂ ಸೊಂಕು ಇದೆ ಎಂದು ವರದಿಯಾಗಿದೆ. ವಸತಿ ಗೃಹದಲ್ಲಿರುವ ಬಾಲಕಿಯರು ಗರ್ಭಿಣಿಯಾಗಿದ್ದಾರೆಂಬ ಸುದ್ದಿಯನ್ನು ಸ್ಥಳೀಯ ಮಾಧ್ಯಮಗಳು ಬಿಹಾರದ ಮುಜಾಫರ್ಪುರ ಬಾಲಕಿಯರ ವಸತಿನಿಲಯದಲ್ಲಾದ ಘಟನೆಗೆ ಹೋಲಿಸಿ ವರದಿ ಮಾಡಿವೆ.
ವಸತಿ ನಿಲಯದಲ್ಲಿರುವ ಹೆಣ್ಣುಮಕ್ಕಳಲ್ಲಿ ಏಳು ಮಂದಿ ಗರ್ಭಿಣಿಯರು. ಅವರಲ್ಲಿ ಐವರಲ್ಲಿ ಕರೊನಾ ದೃಢಪಟ್ಟಿದೆ. ಇನ್ನಿಬ್ಬರ ವರದಿ ನೆಗೆಟಿವ್ ಎಂದು ಬಂದಿದೆ ಎಂದು ಹೇಳಲಾಗಿದೆ. ಅದರಲ್ಲೂ ಒಂದು ಹುಡುಗಿಗೆ ಎಚ್ಐವಿ ಇದೆ ಎನ್ನಲಾಗಿದೆ. ಇದನ್ನೂ ಓದಿ: VIDEO: ಟ್ರೆಂಡಿಂಗ್ನಲ್ಲಿದೆ ಚಹಾ ಮಾಡುವ ಈ ವಿಧಾನ- ನೀವೂ ಟ್ರೈ ಮಾಡಿ :)
ಇಲ್ಲಿನ 57 ಹುಡುಗಿಯರಿಗೆ ಕರೊನಾ ದೃಢಪಟ್ಟ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಹಾಗೂ ಇನ್ನೂ ಮದುವೆಯಾಗದ, ಅಪ್ರಾಪ್ತ ಹುಡುಗಿಯರು ಗರ್ಭಿಣಿಯಾಗಿದ್ದಾರೆ ಎಂಬ ವಿವಾದ ಸೃಷ್ಟಿಯಾಗುತ್ತಿದ್ದಂತೆ ಅಲ್ಲಿನ ಜಿಲ್ಲಾಧಿಕಾರಿ ಡಾ. ಬ್ರಹ್ಮದೇವ್ ರಾಮ್ ಅವರು ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಟ್ರೋಲ್ಗೆ ಹೆದರಿದ ಸೋನಾಕ್ಷಿ ಸಿನ್ಹಾ…! ಟ್ವಿಟರ್ ಖಾತೆ ಡಿ- ಆ್ಯಕ್ಟಿವೇಟ್
ಸೋಂಕಿತರಾದ 57 ಹುಡುಗಿಯರಲ್ಲಿ ಐವರು ಗರ್ಭಿಣಿಯರು ಇದ್ದಾರೆ. ಉಳಿದ ಇಬ್ಬರು ಗರ್ಭಿಣಿಯರಿಗೆ ಕರೊನಾ ನೆಗೆಟಿವ್ ಎಂದು ವರದಿ ಬಂದಿದೆ. ಇನ್ನು ಗರ್ಭಿಣಿಯರಾದ ಹುಡುಗಿಯರು ಯಾರೂ ಇಲ್ಲಿಗೆ ಬಂದ ನಂತರ ಆಗಿದ್ದಲ್ಲ. ಇವರೆಲ್ಲ ಬೇರೆಬೇರೆ ಜಿಲ್ಲೆಗಳಿಂದ ಕಳೆದ ವರ್ಷ ಡಿಸೆಂಬರ್ನಲ್ಲಿ ಇಲ್ಲಿಗೆ ಬಂದವರು. ಆಯಾ ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಯವರು ಕಳಿಸಿದ್ದಾರೆ. ಇವೆಲ್ಲವೂ ಪೋಕ್ಸೋ ಕಾಯ್ದೆಯಡಿ ಇರುವ ಪ್ರಕರಣಗಳು. ನಮ್ಮ ಆಶ್ರಯತಾಣದಲ್ಲಿ ಎಲ್ಲರನ್ನೂ ರಕ್ಷಣೆ ಮಾಡಲಾಗುತ್ತಿದೆ ಎಂದಿದ್ದಾರೆ. (ಏಜೆನ್ಸೀಸ್)