

ಮುಂಬೈ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇಡೀ ದೇಶವನ್ನು ತಲ್ಲಣಗೊಳಿಸಿತ್ತು. ಈಗ ಅದೇ ಘಟನೆಯನ್ನು ಹೋಲುವ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ತನ್ನ ಪ್ರೇಮಿಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಕುದಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮನೋಜ್ ಸಹಾನಿ(56) ಎಂಬಾತನೇ ಈ ದುಷ್ಕೃತ್ಯ ಎಸಗಿದ ಆರೋಪಿಯಾಗಿದ್ದು, ಸರಸ್ವತಿ ವೈದ್ಯ (32) ಮೃತ ದುರ್ದೈವಿಯಾಗಿದ್ದಾಳೆ. ಲಿವ್ ಇನ್ ರಿಲೇಷನ್ನಲ್ಲಿದ್ದ ಇಬ್ಬರು ಮೀರಾರಸ್ತೆಯ ಪ್ರದೇಶದಲ್ಲಿ ಬಾಡಿಗೆ ಫ್ಲ್ಯಾಟ್ವೊಂದರಲ್ಲಿ ವಾಸಿಸುತ್ತಿದ್ದರು.
ಫ್ಲ್ಯಾಟ್ನಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳಿಂದ ಬುಧವಾರ ನಯಾನಗರ ಪೊಲೀಸ್ ಠಾಣೆಗೆ ಕರೆ ಬಂದಿದೆ. ನಂತರ ಫ್ಲ್ಯಾಟ್ ಬಾಗಿಲನ್ನು ಒಡೆದು ನೋಡಿದಾಗ, ಮಹಿಳೆಯ ಕೊಳೆತ ದೇಹವು ತುಂಡುಗಳಾಗಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರು ದೇಹವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ಆಕೆಯ ದೇಹದ ತುಂಡುಗಳನ್ನು ಕುಕ್ಕರ್‌ನಲ್ಲಿ ಕುದಿಸಿ ನಂತರ ಅವುಗಳನ್ನು ವಿಲೇವಾರಿ ಮಾಡಲು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ. ಮಹಿಳೆಯ ದೇಹದ 12-13 ತುಂಡುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)