'ಜಾರ್ಜಿಯಾ' ಗಡಿಯಲ್ಲಿ 56 ಭಾರತೀಯರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ; ಮಹಿಳೆ ಆರೋಪ|Georgia

Georgia
Published on

Georgia; ಜಾರ್ಜಿಯಾದ ಗಡಿಯನ್ನು ದಾಟಿ ಅರ್ಮೇನಿಯಾಕ್ಕೆ ಪ್ರವೇಶಿಸುವಾಗ 56 ಭಾರತೀಯ ಪ್ರವಾಸಿಗರ ಮೇಲೆ ಅತ್ಯಂತ ಅಮಾನವೀಯ ವರ್ತನೆ ತೋರಲಾಗಿದೆ ಎಂದು ಮಹಿಳೆಯೊಬ್ಬರು ಜಾರ್ಜಿಯಾ ಗಡಿ ಅಧಿಕಾರಿಗಳ ವಿರುದ್ಧ ಆರೋಪಿಸಿದ್ದಾರೆ. ಮಾನ್ಯವಿರುವ ವೀಸಾಗಳು ಮತ್ತು ದಾಖಲೆಗಳನ್ನು ಹೊಂದಿದ್ದರೂ ಸಹ ಅಮಾನವೀಯವಾಗಿ ವರ್ತಿಸಿದ್ದರಿಂದ, ಭಾರತೀಯರೆಲ್ಲರೂ ಶೀತ ವಾತಾವರಣದಲ್ಲಿ ಯಾವುದೇ ಆಹಾರ ಅಥವಾ ಶೌಚಾಲಯವಿಲ್ಲದೆ ಹೊರಗೆ ಕುಳಿತುಕೊಳ್ಳಬೇಕಾಯಿತು ಎಂದು ಪಟೇಲ್ ಧ್ರುವಿ ಎಂಬುವವರು ಇನ್​ಸ್ಟಾಗ್ರಾಮ್​ ಮೂಲಕ ಆರೋಪಿಸಿದ್ದಾರೆ.

ಮಹಿಳೆ ಆರೋಪ ಏನು.?

56 ಭಾರತೀಯರನ್ನು ಆಹಾರ ಅಥವಾ ಶೌಚಾಲಯ ಸೌಲಭ್ಯಗಳಿಲ್ಲದೆ, ಶೀತ ತಾಪಮಾನದಲ್ಲಿ ಕಾಯುವಂತೆ ಮಾಡಲಾಗಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ನಮ್ಮ ಪಾಸ್‌ಪೋರ್ಟ್‌ಗಳನ್ನು 2 ಗಂಟೆಗೂ ಹೆಚ್ಚು ಕಾಲ ಮುಟ್ಟುಗೋಲು ಹಾಕಿಕೊಳ್ಳಲಾಯಿತು. ದನಗಳಂತೆ ಫುಟ್‌ಪಾತ್‌ನಲ್ಲಿ ಕುಳಿತುಕೊಳ್ಳಲು ಒತ್ತಾಯಿಸಲಾಯಿತು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದು ಜಾರ್ಜಿಯಾ ಭಾರತೀಯರನ್ನು ನಡೆಸಿಕೊಳ್ಳುವ ರೀತಿ, ಇದು ನಾಚಿಕೆಗೇಡಿನ ಎಂದು ಮಹಿಳೆ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವಾಲಯ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಅಧಿಕೃತ ಪ್ರೊಫೈಲ್‌ಗಳನ್ನು ಟ್ಯಾಗ್ ಮಾಡಿ ತಮ್ಮ ಪೋಸ್ಟ್​ನಲ್ಲಿ ಬರೆದಿದ್ದಾರೆ. ಚಿತ್ರೀಕರಣ ಮಾಡದಂತೆ ತಡೆಯಲಾಯಿತು, ಆದರೆ ಅಪರಾಧಿಗಳಂತೆ ರೆಕಾರ್ಡ್ ಮಾಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

(ಏಜೆನ್ಸೀಸ್)

ಅಂದಹಾಗೆ, ಪಟೇಲ್ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಓ ದೇವರೇ ನಾವು ಡಿಸೆಂಬರ್‌ನಲ್ಲಿ ಜಾರ್ಜಿಯಾ ಮತ್ತು ಅರ್ಮೇನಿಯಾಗೆ ಹೋಗಲು ಯೋಜಿಸುತ್ತಿದ್ದೆವು ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು, ಅದೃಷ್ಟವಶಾತ್ ನಾವು ಭೇಟಿ ನೀಡಿದಾಗ ಈ ರೀತಿಯ ಸಮಸ್ಯೆಗಳು ಇರಲಿಲ್ಲ ಎಂದಿದ್ದಾರೆ. ಇನ್ನೂ ಮತ್ತೊಬ್ಬ ಬಳಕೆದಾರರು ಇದು ತುಂಬಾ ಒಳ್ಳೆಯ ಜನರನ್ನು ಹೊಂದಿರುವ ಸುಂದರ ದೇಶ, ಸರ್ಕಾರಿ ಮಟ್ಟದಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ಭಾರತೀಯರು ಅಲ್ಲಿಗೆ ಏಕೆ ಹೋಗುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net