Patna High Court | ಪ್ರಧಾನಿ ತಾಯಿ ಬಗ್ಗೆ ಬಿಹಾರ ಕಾಂಗ್ರೆಸ್​​ ಪೋಸ್ಟ್​​; ವಿಡಿಯೋ ಡಿಲೀಟ್​​ ಮಾಡುವಂತೆ ಸೂಚನೆ ನೀಡಿದ ಪಾಟ್ನಾ ಹೈಕೋರ್ಟ್!

Modi and Mother
Published on

Patna High Court: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿ ಹೀರಾಬೆನ್​​ ಬಗ್ಗೆ ವಿವಾದಾತ್ಮಕ ಕೃತಕ ಬುದ್ಧಿಮತ್ತೆ ಆಧಾರಿತ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವುದನ್ನು ತೆಗೆದುಹಾಕುವಂತೆ ಬಿಹಾರ ಕಾಂಗ್ರೆಸ್​ ಘಟಕಕ್ಕೆ ಪಾಟ್ನಾ ಹೈಕೋರ್ಟ್ ಬುಧವಾರ (ಸೆ 17) ನಿರ್ದೇಶನ ನೀಡಿದೆ .

ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ಬಜಂತ್ರಿ ಅವರ ಪೀಠ, ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ವಿಡಿಯೋವನ್ನು ಡಿಲೀಟ್​​ ಮಾಡುವಂತೆ ತಿಳಿಸಿದೆ.

ಆಗಿದ್ದೇನು.?

ಸೆಪ್ಟೆಂಬರ್ 10 ರಂದು ಬಿಹಾರ ಕಾಂಗ್ರೆಸ್ ಘಟಕವು "AI GENERATED" ಎಂದು ಗುರುತಿಸಲಾದ 36 ಸೆಕೆಂಡುಗಳ ವೀಡಿಯೊವನ್ನು ಪೋಸ್ಟ್ ಮಾಡಿತ್ತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ ಮತ್ತು ಎನ್‌ಡಿಎ ಮಿತ್ರಪಕ್ಷಗಳು ಈ ಪ್ರಧಾನಿಯನ್ನು ಗುರಿಯಾಗಿಸಲು ಕಾಂಗ್ರೆಸ್ ಇಂತಹ ನಾಚಿಕೆಗೇಡಿನ ತಂತ್ರಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದವು. ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದ ಕಾಂಗ್ರೆಸ್​​, ಪ್ರಧಾನಿ ಮೋದಿ ಅಥವಾ ಅವರ ತಾಯಿಯ ಬಗ್ಗೆ ಅಗೌರವ ತೋರಿಸಿಲ್ಲ ಎಂದು ಹೇಳಿತ್ತು.

ಬಿಜೆಪಿ ದೆಹಲಿ ಚುನಾವಣಾ ಕೋಶದ ಸಂಚಾಲಕ ಸಂಕೇತ್ ಗುಪ್ತಾ, ನಾರ್ತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೆಹಲಿ ಪೊಲೀಸರು ಸೆಪ್ಟೆಂಬರ್ 13 ರಂದು ಕಾಂಗ್ರೆಸ್ ಮತ್ತು ಅದರ ಐಟಿ ಸೆಲ್​​ ವಿರುದ್ಧ ವೀಡಿಯೊಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ದೂರಿನಲ್ಲಿ ದೃಶ್ಯಗಳು ಮಾನಹಾನಿಕರವಾಗಿವೆ ವಿವರಿಸಲಾಗಿದ್ದು, ಅವು ಪ್ರಧಾನಿ ಮೋದಿಯವರ ತಾಯಿಯ ಘನತೆ ಮತ್ತು ಮಾತೃತ್ವದ ಘನತೆಗೆ ಧಕ್ಕೆ ತರುತ್ತವೆ ಎಂದು ಹೇಳಲಾಗಿದೆ.

ಇದೇ ಮೊದಲಲ್ಲ..

ಈ ಒಂದು ತಿಂಗಳ ಅವಧಿಯಲ್ಲಿ ಪ್ರಧಾನಿ ಮತ್ತು ಅವರ ದಿವಂಗತ ತಾಯಿ ಎರಡನೇ ಬಾರಿ ರಾಜಕೀಯ ಟೀಕೆಗೆ ಗುರಿಯಾಗುತಿದ್ದಾರೆ. ಆಗಸ್ಟ್ 27 ರಂದು ದರ್ಭಾಂಗದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ನೇತೃತ್ವದಲ್ಲಿ ನಡೆದ 'ಮತದಾರ ಅಧಿಕಾರ ಯಾತ್ರೆ'ಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಮತ್ತು ಹೀರಾಬೆನ್ ಮೋದಿ ಅವರನ್ನು ಉದ್ದೇಶಿಸಿ ಅಶ್ಲೀಲ ಘೋಷಣೆಗಳನ್ನು ಕೂಗಲಾಗಿದೆ ಎಂದು ಸುದ್ದಿಯಾಗಿ ಅದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿತ್ತು.

ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ , ಈ ಘಟನೆ ದೇಶದ ಎಲ್ಲಾ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಮಾಡಿದ ಅವಮಾನ ಎಂದು ಹೇಳಿದರು.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net