HD Deve Gowda | ಪ್ರಧಾನಿ ಮೋದಿ ಜನ್ಮದಿನಕ್ಕೆ ಶುಭಕೋರಿದ ಮಾಜಿ ಪ್ರಧಾನಿ ದೇವೆಗೌಡ; ಶತಾಯುಷಿಗಳಾಗಿ ಬಾಳಿ ಎಂದ ದೊಡ್ಡಗೌಡ್ರು

HD Deve Gowda Narendra modi
Published on

HD Deve Gowda: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ 75ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತಿದ್ದು, ಅನೇಕ ರಾಜಕಾರಣಿಗಳು, ನಟ ನಟಿಯರು, ಉದ್ಯಮಿಗಳು ಸೇರಿದಂತೆ ಸಾಕಷ್ಟು ಜನ ಶುಭಕೋರಿದ್ದಾರೆ. ಅದೇ ರೀತಿ ಮಾಜಿ ಪ್ರಧಾನಿ ಎಚ್​​ ಡಿ ದೇವೆಗೌಡ ಕೂಡ ಶುಭಾಶಯ ಕೋರಿ, ಶತಾಯುಷಿಗಳಾಗಿ ಎಂದು ಹಾರೈಸಿದ್ದಾರೆ.

ಪ್ರಧಾನಿ ಮೋದಿಗೆ ಪತ್ರ ಬರೆದಿರುವ ದೇವೆಗೌಡರು, ನಿಮ್ಮ 75ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭಾಶಯಗಳು, ದೇವರು ಯಾವಾಗಲೂ ನಿಮ್ಮ ಜೊತೆ ಇರಲಿ, ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ನಿಮಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದರು.

ನೀವು ರಾಷ್ಟ್ರದ ಚುಕ್ಕಾಣಿ ಹಿಡಿದ ಕಳೆದ 11 ವರ್ಷಗಳಲ್ಲಿ, ಸಾಮಾಜಿಕ, ಆರ್ಥಿಕ ಸ್ಥಿರತೆ ಮತ್ತು ಭದ್ರತೆಯನ್ನು ಖಚಿತಪಡಿಸಿದ್ದೀರಿ, ಅದನ್ನು ದೇಶದ ಜನರು ಪ್ರತಿ ಚುನಾವಣೆಯಲ್ಲೂ ಒಪ್ಪಿಕೊಂಡಿದ್ದಾರೆ, ಭಾರತವು ಒಂದು ದೊಡ್ಡ, ವೈವಿಧ್ಯಮಯ ಮತ್ತು ಸಂಕೀರ್ಣ ರಾಷ್ಟ್ರವಾಗಿದ್ದು, ಅದನ್ನು ಒಟ್ಟಿಗೆ ಇಟ್ಟುಕೊಳ್ಳುವುದು ಮತ್ತು ಶಾಂತವಾಗಿಡುವುದು ಸುಲಭದ ಸವಾಲಲ್ಲ ಎಂದರು.

ಕಳೆದ ಒಂದು ದಶಕದಲ್ಲಿ, ದೇಶ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ, ಮೊದಲೆಲ್ಲ ಕಾಂಗ್ರೆಸ್ ಪಕ್ಷ ಮಾತ್ರ ಈ ದೇಶವನ್ನು ಒಟ್ಟಿಗೆ ಹಿಡಿದಿಟ್ಟುಕೊಂಡು ಸ್ಥಿರತೆಯಿಂದ ಉತ್ತಮ ಆಡಳಿತವನ್ನು ನೀಡಲು ಸಾಧ್ಯ ಎಂಬ ಮಾತುಗಳಿದ್ದವು, ಆದರೆ ನೀವು ಆ ಮಾತನ್ನು ಶಾಶ್ವತವಾಗಿ ಸುಳ್ಳಾಗಿಸಿದ್ದೀರಿ, ಭಾರತದಲ್ಲಿ ಪ್ರತಿಭೆಗಳಿಗೇನು ಕಮ್ಮಿ ಇಲ್ಲ ಎನ್ನುವುದನ್ನು ನೀವೂ ನಿರೂಪಿಸಿದ್ದೀರಿ, ನೀವು ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದ ಸಾಧ್ಯತೆಗಳನ್ನು ತೆರೆದಿಟ್ಟಿದ್ದೀರಿ ಮತ್ತು ಅದರ ಉಜ್ವಲ ಭವಿಷ್ಯದ ಮೇಲೆ ಅಚಲ ನಂಬಿಕೆಯನ್ನು ಇರಿಸಿದ್ದೀರಿ ಎಂದಿದ್ದಾರೆ.

ನಿಮ್ಮ ದೀರ್ಘಾವಧಿಯ ಅಧಿಕಾರದ ಮತ್ತೊಂದು ಮಹತ್ವದ ಸಾಧನೆಯೆಂದರೆ, ಭಾರತೀಯರಲ್ಲಿ ಸಾಂಸ್ಕೃತಿಕ ಗುರುತು ಮತ್ತು ಸ್ವಾತಂತ್ರ್ಯದ ಬಗ್ಗೆ ಹೊಸ ವಿಶ್ವಾಸವನ್ನು ಬೆಳೆಸಿದ್ದೀರಿ. ನಮ್ಮ ನಾಗರಿಕತೆಯ ಶಕ್ತಿಯನ್ನು ಪ್ರಪಂಚದ ಮುಂದೆ ಪದೇ ಪದೇ ಪ್ರದರ್ಶಿಸಿದ್ದೀರಿ. ಇದು ರಾಷ್ಟ್ರೀಯ ಪುನರುಜ್ಜೀವನಕ್ಕೆ ದಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಭಾರತ ಇನ್ನೂ ಉನ್ನತ ಹಂತ ತಲುಪಲಿದೆ ಎಂದರು. ಭಾರತವು ಇನ್ನು ಮುಂದೆ ಒಪ್ಪಂದಗಳು, ನೆರವು ಮತ್ತು ರಿಯಾಯಿತಿಗಳಿಗಾಗಿ ಪಾಶ್ಚಿಮಾತ್ಯ ಶಕ್ತಿಗಳ ಬಳಿ ಓಡಿಹೋಗುವ ಅವಶ್ಯಕತೆ ಇಲ್ಲ, ಬದಲಿಗೆ ಸಮಾನವಾಗಿ ಮಾತುಕತೆ ನಡೆಸುತ್ತಿದೆ. ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ದೊಡ್ಡ ಆದ್ಯತೆಯನ್ನಾಗಿ ಮಾಡುವುದರ ಜೊತೆಗೆ ತನ್ನ ನಿಯಮಗಳು ಮತ್ತು ಷರತ್ತುಗಳನ್ನು ಸದ್ದಿಲ್ಲದೆ ನಿಗದಿಪಡಿಸುತ್ತಿದೆ. ನೀವೂ ಪದೇ ಪದೇ ಹೇಳುವ 'ರಾಷ್ಟ್ರ ಮೊದಲು' ಎಂಬ ಘೋಷಣೆ ಖಾಲಿ ಮಾತಲ್ಲ, ಆ ವಿಷಯವಾಗಿ ಯಾವಾಗಲೂ ಪ್ರಯತ್ನ ನಡೆಸುತ್ತಲೇ ಇರುತ್ತೀರಿ ಅದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ, ಭಗವಂತ ನಿಮಗೆ ಉತ್ತಮ ಆರೋಗ್ಯವನ್ನು ನೀಡಿ, ಶತಾಯುಷಿಯಾಗುವಂತೆ ನೋಡಿಕೊಳ್ಳಲಿ ಎಂದು ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net