

ಮೆಲ್ಬೋರ್ನ್/ನವದೆಹಲಿ: ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿರುವ ನಡುವೆ ಟೀಮ್ ಇಂಡಿಯಾ ಬಯೋ-ಬಬಲ್ ಉಲ್ಲಂಘನೆಯ ಸಂಕಷ್ಟ ಎದುರಿಸಿದೆ. ಉಪನಾಯಕ ರೋಹಿತ್ ಶರ್ಮ, ಆರಂಭಿಕ ಶುಭಮಾನ್ ಗಿಲ್ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಸಹಿತ ಭಾರತ ತಂಡದ ಐವರು ಆಟಗಾರರು ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿದ ಆರೋಪ ಎದುರಿಸಿದ್ದು, ಐಸೋಲೇಷನ್‌ಗೆ ಒಳಗಾಗಿದ್ದಾರೆ. ಬಯೋ-ಬಬಲ್ ಉಲ್ಲಂಘನೆ ಪ್ರಕರಣದ ಸಮಗ್ರ ತನಿಖೆಯನ್ನೂ ನಡೆಸಲಾಗುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಶನಿವಾರ ತಿಳಿಸಿದೆ.
ಟೀಮ್ ಇಂಡಿಯಾ ಆಟಗಾರರು ಶುಕ್ರವಾರ ಮೆಲ್ಬೋರ್ನ್‌ನ ಒಳಾಂಗಣ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡುತ್ತಿರುವ ವಿಡಿಯೋವನ್ನು ಅಭಿಮಾನಿಯೊಬ್ಬ ಟ್ವಿಟರ್‌ನಲ್ಲಿ ಪ್ರಕಟಿಸಿದ ಬೆನ್ನಲ್ಲೇ ಬಯೋ-ಬಬಲ್ ಉಲ್ಲಂಘನೆಯ ಆರೋಪ ಭುಗಿಲೆದ್ದಿದೆ. ಬಿಸಿಸಿಐ ಶನಿವಾರ ಮೊದಲಿಗೆ ಈ ಆರೋಪಗಳನ್ನು ತಳ್ಳಿಹಾಕಿತ್ತು. ಆದರೆ ಬಳಿಕ ಸಿಎ, ಬಿಸಿಸಿಐ ಜತೆಗೂಡಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದಿದೆ. ಆರಂಭಿಕ ಪೃಥ್ವಿ ಷಾ ಮತ್ತು ವೇಗಿ ನವದೀಪ್ ಸೈನಿ ಮಾರ್ಗಸೂಚಿ ಉಲ್ಲಂಘಿಸಿದ ಆರೋಪ ಎದುರಿಸಿ ಐಸೋಲೇಷನ್‌ಗೆ ಒಳಗಾಗಿರುವ ಮತ್ತಿಬ್ಬರು ಆಟಗಾರರು. ಬಯೋ-ಬಬಲ್ ಮಾರ್ಗಸೂಚಿಯ ಉಲ್ಲಂಘನೆಯಾಗಿದೆಯೇ ಎಂಬುದನ್ನು ತನಿಖೆಯ ಮೂಲಕ ಪರಿಶೀಲಿಸಲಾಗುತ್ತಿದೆ ಎಂದು ಸಿಎ ಪ್ರಕಟಣೆಯಲ್ಲಿ ತಿಳಿಸಿದೆ. ಮೂರನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ಜನವರಿ 7ರಂದು ಆರಂಭಗೊಳ್ಳಲಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ ಐವರು ಆಟಗಾರರನ್ನು ಐಸೋಲೇಷನ್‌ನಲ್ಲಿಡಲಾಗಿದೆ. ಪ್ರಯಾಣ ಮತ್ತು ತರಬೇತಿಯ ವೇಳೆಯೂ ಭಾರತ ತಂಡದ ಇತರ ಸದಸ್ಯರಿಂದ ಇವರನ್ನು ಪ್ರತ್ಯೇಕವಾಗಿಡಲಾಗುವುದು ಎಂದು ಸಿಎ ತಿಳಿಸಿದೆ.
ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಕರೊನಾ ಪ್ರಕರಣಗಳು ಏರಿಕೆ ಕಾಣುತ್ತಿರುವ ನಡುವೆ ಕ್ರಿಕೆಟ್ ಸರಣಿಗಾಗಿ ಐಪಿಎಲ್ ಮಾದರಿಯ ಬಯೋ-ಬಬಲ್ ನಿರ್ಮಿಸಲಾಗಿದೆ. ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಟ್ಟಿರುವ ನಡುವೆ ಇದುವರೆಗೆ ಬಯೋ-ಬಬಲ್ ಅನ್ನು ಸುರಕ್ಷಿತವಾಗಿಯೇ ಕಾಪಾಡಿಕೊಂಡು ಬರಲಾಗುತ್ತಿತ್ತು.
ಫಿಟ್ನೆಸ್ ಸಮಸ್ಯೆಯಿಂದಾಗಿ ತಡವಾಗಿ ಆಸೀಸ್‌ಗೆ ಪ್ರಯಾಣಿಸಿದ್ದ ರೋಹಿತ್ ಇತ್ತೀಚೆಗಷ್ಟೇ 14 ದಿನಗಳ ಕ್ವಾರಂಟೈನ್ ಮುಗಿಸಿ ಭಾರತ ತಂಡವನ್ನು ಕೂಡಿಕೊಂಡಿದ್ದರು.
ಐಸೋಲೇಷನ್‌ನಲ್ಲಿರುವವರು:
ರೋಹಿತ್ ಶರ್ಮ
ಶುಭಮಾನ್ ಗಿಲ್
ನವದೀಪ್ ಸೈನಿ
ರಿಷಭ್ ಪಂತ್
ಪೃಥ್ವಿ ಷಾ
ಮಾರ್ಗಸೂಚಿ ಏನಿದೆ?
ಕ್ರಿಕೆಟ್ ಆಸ್ಟ್ರೇಲಿಯಾದ ಬಯೋ-ಬಬಲ್ ಮಾರ್ಗಸೂಚಿಯ ಪ್ರಕಾರ ಆಟಗಾರರಿಗೆ ಒಳಾಂಗಣ ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡಲು ಅವಕಾಶವಿಲ್ಲ. ಅಲ್ಲದೆ ಸಾರ್ವಜನಿಕ ಸಾರಿಗೆ ಬಳಸಲು ಅವಕಾಶವಿಲ್ಲ. ಆದರೆ ಅವರು ಇರುವ ನಗರವನ್ನು ನಡೆದುಕೊಂಡು ಸುತ್ತಾಡಲು ಅವಕಾಶವಿದೆ.
ಆರೋಪ ನಿರಾಕರಿಸಿದ್ದ ಬಿಸಿಸಿಐ
‘ಜೈವಿಕ-ಸುರಕ್ಷಾ ಮಾರ್ಗಸೂಚಿಯ ಉಲ್ಲಂಘನೆ ಆಗಿಲ್ಲ. ಭಾರತ ತಂಡದ ಎಲ್ಲ ಸದಸ್ಯರಿಗೆ ಮಾರ್ಗಸೂಚಿಯ ಬಗ್ಗೆ ಅರಿವಿದೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮೊದಲು ತಿಳಿಸಿದ್ದರು. ಅಲ್ಲದೆ ಮೆಲ್ಬೋರ್ನ್ ಟೆಸ್ಟ್ ಸೋಲಿನ ಬಳಿಕ ಆಸೀಸ್ ಮಾಧ್ಯಮಗಳು ಈ ರೀತಿಯಾಗಿ ಭಾರತ ತಂಡದಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂದೂ ದೂರಿದ್ದರು.
ಆಸೀಸ್ ಮಾಧ್ಯಮಗಳ ಆರೋಪವೇನು?
ಭಾರತ ತಂಡದ ಆಟಗಾರರಾದ ರೋಹಿತ್ ಶರ್ಮ, ರಿಷಭ್ ಪಂತ್, ನವದೀಪ್ ಸೈನಿ, ಪೃಥ್ವಿ ಷಾ ಮತ್ತು ಶುಭಮಾನ್ ಗಿಲ್ ಮೆಲ್ಬೋರ್ನ್‌ನ ರೆಸ್ಟೋರೆಂಟ್ ಒಂದರಲ್ಲಿ ಶುಕ್ರವಾರ ರಾತ್ರಿ ಊಟ ಮಾಡುತ್ತಿರುವ ವಿಡಿಯೋವನ್ನು ನವಲ್‌ದೀಪ್ ಸಿಂಗ್ ಎಂಬ ಹೆಸರಿನ ಕ್ರಿಕೆಟ್ ಪ್ರೇಮಿಯೊಬ್ಬ ಟ್ವೀಟಿಸಿದ್ದ. ಆಟಗಾರರ ಪಕ್ಕದ ಸೀಟಿನಲ್ಲೇ ನಾನು ಕುಳಿತಿದ್ದೆ ಎಂದೂ ಆತ ಹೇಳಿಕೊಂಡಿದ್ದ. ಆಟಗಾರರು ಒಳಾಂಗಣ ರೆಸ್ಟೋರೆಂಟ್‌ಗೆ ಭೇಟಿ ನೀಡುವ ಮೂಲಕ ಕೋವಿಡ್-19 ಮಾರ್ಗಸೂಚಿಯ ಉಲ್ಲಂಘನೆಯಾಗಿದೆ ಎಂದು ಆಸೀಸ್ ಮಾಧ್ಯಮಗಳು ಆರೋಪಿಸಿವೆ.
ಅಭಿಮಾನಿಯ ಎಡವಟ್ಟು
ಆಟಗಾರರ ಬಿಲ್ ಪಾವತಿ ಮಾಡಿದ್ದಕ್ಕಾಗಿ ರಿಷಭ್ ಪಂತ್ ತಮ್ಮನ್ನು ಆಲಿಂಗಿಸಿಕೊಂಡಿದ್ದರು ಎಂದೂ ಅಭಿಮಾನಿ ನವಲ್‌ದೀಪ್ ಸಿಂಗ್ ಹೇಳಿಕೊಂಡಿದ್ದರು. ಆದರೆ ಬಳಿಕ ಆ ರೀತಿ ತಪ್ಪಾಗಿ ಹೇಳಿದ್ದಕ್ಕೆ ಕ್ಷಮೆಯಾಚಿಸಿದ್ದರು. ಆಟಗಾರರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು ಎಂದೂ ಸ್ಪಷ್ಟಪಡಿಸಿದ್ದರು.
₹6 ಸಾವಿರ ಬಿಲ್ ಪಾವತಿಸಿದ ಅಭಿಮಾನಿ
ಮೆಲ್ಬೋರ್ನ್ ರೆಸ್ಟೋರೆಂಟ್‌ನಲ್ಲಿ ರೋಹಿತ್ ಶರ್ಮ ಸಹಿತ ಭಾರತ ತಂಡದ ಐವರು ಆಟಗಾರರು ಮಾಡಿದ ಊಟದ ಬಿಲ್ 6,600 ರೂಪಾಯಿಗಳನ್ನು (118.69 ಆಸ್ಟ್ರೇಲಿಯನ್ ಡಾಲರ್) ತಾನು ಪಾವತಿಸಿರುವೆ ಎಂದು ಕ್ರಿಕೆಟ್ ಪ್ರೇಮಿ ನವಲ್‌ದೀಪ್ ಸಿಂಗ್ ಹೇಳಿಕೊಂಡಿದ್ದಾರೆ. ಬಿಲ್‌ನ ಚಿತ್ರವನ್ನೂ ಪ್ರಕಟಿಸಿದ್ದು, ‘ಅವರಿಗೆ ಇದು ಗೊತ್ತಿಲ್ಲ. ಆದರೆ ನಾನು ಅವರ ಟೇಬಲ್‌ನ ಬಿಲ್ ಪಾವತಿಸಿರುವೆ. ನನ್ನ ಸೂಪರ್‌ಸ್ಟಾರ್‌ಗಳಿಗೆ ಇಷ್ಟಾನ್ನಾದರೂ ಮಾಡುವೆ’ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿ ಬಿಲ್ ಪಾವತಿಸಿರುವ ವಿಷಯ ಗೊತ್ತಾದಾಗ ರೋಹಿತ್ ಶರ್ಮ, ‘ದಯವಿಟ್ಟು ಹಣ ತೆಗೆದುಕೊಳ್ಳಿ, ಇದು ಸರಿ ಎನಿಸುವುದಿಲ್ಲ’ ಎಂದಿದ್ದರು ಎಂದೂ ಹೇಳಿಕೊಂಡಿದ್ದಾರೆ.