

Vijay Sethupathi: ಭಾರತೀಯ ಚಿತ್ರರಂಗದಲ್ಲಿ ತನ್ನದೇ ವಿಶೇಷ ಅಭಿಮಾನಿಗಳ ಬಳಗವನ್ನು ಹೊಂದಿರುವ ವಿಜಯ್ ಸೇತುಪತಿ, ಸಿನಿಪ್ರೇಕ್ಷಕರು ಅತಿಯಾಗಿ ಇಷ್ಟಪಡುವ ಸ್ಟಾರ್ ನಟರಲ್ಲಿ ಒಬ್ಬರು. ಯಾವುದೇ ಕಥಾಹಂದರವಿರಲಿ, ಎಂತಹ ಪಾತ್ರವಿರಲಿ, ಕೊಟ್ಟ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡುವ ಸೇತುಪತಿ, ಅದ್ಭುತ ನಟನೆಯಿಂದಲೇ ನೋಡುಗರ ಮನಗೆಲ್ಲುತ್ತಾರೆ. ಸರಳ ಅಭಿನಯ, ಪಾತ್ರ ಹಾಗೂ ಕಥೆಯ ಆಯ್ಕೆಯಲ್ಲೇ ಮೊದಲ ಗೆಲುವು ನೋಡುವ ವಿಜಯ್, ಸಿನಿಮಾ ರಿಲೀಸ್ ಆದ ನಂತರ ಅಭಿಮಾನಿಗಳ ಖುಷಿ, ಪ್ರಶಂಸೆಗಳನ್ನು ಪಡೆಯುವ ಮುಖೇನ ದೊಡ್ಡ ಗೆಲುವನ್ನು ಸಾಧಿಸುತ್ತಾರೆ. ಈ ವಿಷಯದಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.
ಇತ್ತೀಚೆಗಷ್ಟೇ 'ಮಹಾರಾಜ' ಚಿತ್ರದಲ್ಲಿ ಹೆಣ್ಣು ಮಗಳ ಜೀವನದಲ್ಲಿ 'ಮಹಾರಾಜ'ನಾಗಿ ಮೆರೆದ ವಿಜಯ್, ಕೇವಲ ಚಿತ್ರಮಂದಿರ ಮಾತ್ರವಲ್ಲದೇ ಒಟಿಟಿಯಲ್ಲಿಯೂ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ, ಪ್ರಶಂಸೆಗಳನ್ನು ಸ್ವೀಕರಿಸಿದ್ದಾರೆ. ಪ್ರತಿಬಾರಿ ತಾವು ಆಯ್ಕೆ ಮಾಡುವ ಕಥಾಹಂದರ ಮತ್ತು ಪಾತ್ರವನ್ನು ಬಹಳ ಸೂಕ್ಷ್ಮವಾಗಿ ಗಮನಿಸುವ ಸೇತುಪತಿ, ಒಮ್ಮೆ ಅದನ್ನು ದೃಢವಾಗಿ ಆಯ್ಕೆ ಮಾಡಿದರೆ, ಸಿನಿಮಾ ಬಹುತೇಕ ಯಶಸ್ವಿ ಎಂದೇ ಹೇಳಲಾಗುತ್ತದೆ. ಏಕೆಂದರೆ, ತಾವು ಅಭಿನಯದ ಸಿನಿಮಾ ಬ್ಲಾಕ್ಬಸ್ಟರ್ ಆದರೆ, ಅದರಲ್ಲಿನ ಅವರ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿರುತ್ತದೆ. ಚಿತ್ರ ಸೋಲು ಕಂಡರೆ ಕನಿಷ್ಠ ಅವರ ಪಾತ್ರಕ್ಕಾದರೂ ಮನ್ನಣೆ ಸಿಕ್ಕಿರುತ್ತದೆ. ಇದು ವಿಜಯ್ ಸೇತುಪತಿ ಸ್ಪೆಷಾಲಿಟಿ ಎಂದರೆ ಖಂಡಿತ ತಪ್ಪಾಗಲಾರದು. ಅಸಲಿಗೆ ಅವರು ತಿರಸ್ಕರಿಸಿದ ಸೂಪರ್ಹಿಟ್ ಹಾಗೂ ಬಹುನಿರೀಕ್ಷಿತ ಚಿತ್ರಗಳು ಯಾವುದು ಎಂಬುದರ ವಿವರ ಹೀಗಿದೆ ಗಮನಿಸಿ.
ಕಮಲ್ ಹಾಸನ್ ಅಭಿನಯದ ಆ್ಯಕ್ಷನ್ ಸಿನಿಮಾ 'ಇಂಡಿಯನ್ 2' ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಬೇಕಿದ್ದ ವಿಜಯ್, ಆ ರೋಲ್ ನಾನು ಮಾಡೋದಿಲ್ಲ ಎಂದು ತಿರಸ್ಕರಿಸಿದರು. ದೊಡ್ಡ ತಾರಾಬಳಗವನ್ನೇ ಹೊಂದಿದ್ದ ಈ ಚಿತ್ರದ ಭಾಗವಾಗಲು ವಿಜಯ್ ಸೇತುಪತಿ ಇಚ್ಛಿಸಲಿಲ್ಲ.
'ಉಪ್ಪೇನಾ' ಚಿತ್ರದ ನಾಯಕಿ ಕೃತಿ ಶೆಟ್ಟಿ ಜತೆ ರೊಮ್ಯಾನ್ಸ್ ಮಾಡಬೇಕಿದ್ದ ಸೇತುಪತಿ, ನಾಯಕನ ಪಾತ್ರದಲ್ಲಿ ಅವರೊಂದಿಗೆ ಮಿಂಚಲು ಹಿಂದೇಟು ಹಾಕಿದರು. ಸ್ಟಾರ್ ನಟನ ರಿಜೆಕ್ಷನ್ನಿಂದ ಆ ಅವಕಾಶ ಇತರರ ಪಾಲಾಗುವ ಸಾಧ್ಯತೆಗಳಿತ್ತು. ಆದರೆ, ನಿರ್ದೇಶಕರು ನಂತರದಲ್ಲಿ ಹೀರೋಯಿನ್ ಪಾತ್ರದಿಂದ ಕೃತಿಯನ್ನು ಕೈಬಿಟ್ಟು ಅನುಕೃತಿ ವಾಸ್ರನ್ನು ಸೇರಿಸಿಕೊಂಡರು.
ಅಮಿರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ವಿಜಯ್ ಸೇತುಪತಿ ಬಹುಮುಖ್ಯ ಪಾತ್ರವೊಂದನ್ನು ನಿರ್ವಹಿಸಬೇಕಿತ್ತು. ಆದರೆ, ವಿಜಯ್, ಆ ಪಾತ್ರದಲ್ಲಿ ನಟಿಸಲು ತನಗೆ ಇಷ್ಟವಿಲ್ಲ ಎಂದು ಆಫರ್ ತಿರಸ್ಕರಿಸಿದರು.
ಶ್ರೀಲಂಕಾ ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರಳಿಧರನ್ ಅವರ ಬಯೋಪಿಕ್ ಚಿತ್ರಕ್ಕಾಗಿ ವಿಜಯ್ ಸೇತುಪತಿ ಅವರನ್ನು ಮೊದಲು ಸಂಪರ್ಕಿಸಲಾಗಿತ್ತು. ಅಸಲಿಗೆ ನಿರ್ದೇಶಕರ ತಲೆಯಲ್ಲಿದ್ದ ಮೊದಲ ಆಯ್ಕೆಯೇ ವಿಜಯ್. ಆದರೆ, ನಟನ ತಿರಸ್ಕಾರದಿಂದ ಆ ಅವಕಾಶ ಮಧುರ್ ಮಿಟ್ಟಲ್ ಅವರ ಪಾಲಾಯಿತು.
ಬ್ಲಾಕ್ಬಸ್ಟರ್ 'ಪುಷ್ಪ' ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿರುವ ಫಹಾದ್ ಫಾಸಿಲ್ ಪಾತ್ರವನ್ನು ಅಸಲಿಗೆ ವಿಜಯ್ ಸೇತುಪತಿ ಮಾಡಬೇಕಿತ್ತು. ಆದರೆ, ಈ ರೋಲ್ನಲ್ಲಿ ಕಾಣಿಸಿಕೊಳ್ಳಲು ನಾನು ಬಯಸುವುದಿಲ್ಲ ಎಂದು ವಿಜಯ್ ಸೇತುಪತಿ ಹೇಳಿದ ಕಾರಣ, ಆ ಪಾತ್ರವನ್ನು ಫಹಾದ್ಗೆ ನೀಡಲಾಯಿತು.
ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ 'ಆರ್ಸಿ 16' ಚಿತ್ರದಲ್ಲಿ ಒಂದು ಪ್ರಮುಖ ಪಾತ್ರಕ್ಕಾಗಿ ವಿಜಯ್ ಸೇತುಪತಿ ಅವರನ್ನು ನಿರ್ದೇಶಕರು ಸಂಪರ್ಕಿಸಿದ್ದರು. ಆದರೆ, ಈ ಪಾತ್ರದಲ್ಲಿ ಅಭಿನಯಿಸಲು ವಿಜಯ್ ಸೇತುಪತಿ ನಿರಾಕರಿಸಿದ್ದಾರೆ ಎಂದು ಸಿನಿ ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).