

Murder Case: ನಿನ್ನೆ (ಫೆ.24) ಕುಟುಂಬದ ನಾಲ್ವರು ಸದಸ್ಯರು ಮತ್ತು ಪ್ರೇಯಸಿ ಸೇರಿದಂತೆ ಒಟ್ಟು ಐವರನ್ನು ಬರ್ಬರವಾಗಿ ಹತ್ಯೆಗೈದ ಆರೋಪಿ ಅಫಾನ್ ಸದ್ಯ ಪೊಲೀಸರ ವಶದಲ್ಲಿದ್ದಾನೆ. ಅಜ್ಜಿ, ಕಿರಿಯ ಸಹೋದರ, ತಂದೆ ಸಹೋದರ ಲತೀಫ್ ಮತ್ತು ಅವರ ಪತ್ನಿ ಶಾಹಿದಾ ಮತ್ತು ಪ್ರೇಯಸಿ ಫರ್ಸಾಳಾನ್ನು ಸುತ್ತಿಗೆಯಿಂದ ಕೊಲೆ ಮಾಡಿದ ಘಟನೆ ಇಡೀ ಕೇರಳವನ್ನೇ ಬೆಚ್ಚಿಬೀಳಿಸಿದೆ.
ಇದನ್ನೂ ಓದಿ: ಧಾರವಾಡಕ್ಕೆ ನೀರು ಹರಿಸಿದರೆ ಹೋರಾಟ
ಕುಟುಂಬದ ಸದಸ್ಯರನ್ನು ಅಮಾನುಷವಾಗಿ ಹಲ್ಲೆಗೈದಿದ್ದಲ್ಲದೇ, ಲತೀಫ್ ಮತ್ತು ಆತನ ಪತ್ನಿಗೆ 18ಕ್ಕೂ ಹೆಚ್ಚು ಬಾರಿ ಸುತ್ತಿಗೆ ಸೇರಿದಂತೆ ಇತರೆ ವಸ್ತುಗಳಿಂದ ಭೀಕರವಾಗಿ ಹತ್ಯೆಗೈದ ಘಟನೆ ಕೇರಳದ ತಿರುವನಂತಪುರಂನಲ್ಲಿ ಸಂಭವಿಸಿದೆ. ಪ್ರಸ್ತುತ ಕೊಲೆ ಪ್ರಕರಣ ದಾಖಲಿಸಿಕೊಂಡು, ಚುರುಕು ತನಿಖೆ ಕೈಗೊಂಡಿರುವ ಖಾಕಿ ಪಡೆ, ಯಾವ ಕಾರಣಕ್ಕಾಗಿ ಆರೋಪಿ ಅಫಾನ್ ತನ್ನದೇ ಕುಟುಂಬದವರನ್ನು ಇಷ್ಟೂ ಕ್ರೂರವಾಗಿ ಕೊಲೆಗೈದಿದ್ದಾನೆ ಎಂಬುದನ್ನು ತಿಳಿಯಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಕೊಲೆ ಹಿಂದಿದ್ದ ಉದ್ದೇಶವೇನು? ಎಂಬ ನಿಖರ ಕಾರಣ ತಿಳಿಯಲು ಇನ್ನೂ ಪೊಲೀಸರಿಗೆ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಆತನ ಅಸ್ಪಷ್ಟ ಉತ್ತರಗಳು.
ನಾಲ್ವರು ಕುಟುಂಬಸ್ಥರು ಮತ್ತು ಓರ್ವ ಯುವತಿ ಸಾವಿಗೀಡಾದವರು ಎಂದು ವರದಿ ಉಲ್ಲೇಖಿಸಿದೆ. ಮೃತರನ್ನು ಅಜ್ಜಿ ಸಲ್ಮಾಬೀಬಿ, ಸಹೋದರ ಅಫ್ಸಾನ್ (13), ಯುವಕನ ತಂದೆಯ ಸಹೋದರ ಲತೀಫ್, ಲತೀಫ್ ಪತ್ನಿ ಶಾಹಿದಾ ಮತ್ತು ಓರ್ವ ಯುವತಿ ಎಂದು ಆರಂಭಿಕ ತನಿಖೆಯಲ್ಲಿ ಗುರುತಿಸಲಾಗಿದೆ. ಈ ಪೈಕಿ ಯುವತಿ ಫರ್ಸಾನಾಳ ಆರೋಪಿ ಅಫಾನ್ ಪ್ರೇಯಸಿ ಎಂಬುದು ದೃಢವಾಗಿದೆ. ಫೆ.24ರ ಮುಂಜಾನೆ, ಪೊಲೀಸರಿಗೆ ಕರೆ ಮಾಡಿದ ಅಫಾನ್, ತನ್ನ ಕುಟುಂಬದ 6 ಮಂದಿಯನ್ನು ಭೀಕರವಾಗಿ ಹಲ್ಲೆಗೈದು ನಂತರ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದ.
ಮಾಹಿತಿಯ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಅಫಾನ್ನನ್ನು ವಶಕ್ಕೆ ಪಡೆದು, ಕೊಲೆ ನಡೆದ ಮೂರು ಪ್ರತ್ಯೇಕ ಮನೆಗಳನ್ನು ಪರಿಶೀಲಿಸಿದ್ದಾರೆ. ಅಫಾನ್ ಹೊಡೆತಕ್ಕೆ ಬಲಿಯಾದವರ ಪೈಕಿ ಆತನ ತಾಯಿ ಮಾತ್ರ ಇನ್ನೂ ಜೀವಂತವಾಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಈ ವೇಳೆ ಅಫಾನ್ ತಾಯಿ ಗಂಭೀರವಾಗಿ ಗಾಯಗೊಂಡು, ಚಿಂತಾಜನಕ ಸ್ಥಿತಿ ತಲುಪಿದ್ದರು. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು, ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದಾರೆ.
ಕ್ರೂರ ಸಾಮೂಹಿಕ ಹತ್ಯೆಯ ಆರೋಪಿ 23 ವರ್ಷದ ಅಫಾನ್ನ ತಂದೆ ರಹೀಮ್, ಪ್ರಸ್ತುತ ಸೌದಿ ಅರೇಬಿಯಾದಲ್ಲಿ ನೆಲೆಸಿರುವುದು ತಿಳಿದುಬಂದಿದೆ. ಕಳೆದ ಐದು ವರ್ಷಗಳಿಂದ ಹೆಂಡತಿ, ಕುಟುಂಬಸ್ಥರನ್ನು ನೋಡಲು ಬಾರದ ಈತನನ್ನು ಕೇರಳಕ್ಕೆ ಕರೆತರಲು ಪೊಲೀಸರು ಸತತ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಅಸಲಿಗೆ ದುಬೈನಲ್ಲಿ ವಲಸೆಯಿರುವ ರಹೀಮ್, ಏರ್ಪೋರ್ಟ್ಗೆ ಸಲ್ಲಿಸಬೇಕಾದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿಲ್ಲ. ಇದ್ಯಾವುದು ಸರಿಯಿಲ್ಲದ ಕಾರಣ ಆತ ಕೇರಳಕ್ಕೆ ಪ್ರಯಾಣಿಸಲು ಸಾಧ್ಯವಾಗಿಲ್ಲ. ಮೂಲಗಳ ಪ್ರಕಾರ, ಇದೇ ಭಾನುವಾರ ರಹೀಮ್ ಕೇರಳಕ್ಕೆ ಬಂದಿಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಅಪರಾಧ ಎಸಗುವಾಗ ಅಫಾನ್ ಡ್ರಗ್ಸ್ ಪ್ರಭಾವಕ್ಕೆ ಒಳಗಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪರೀಕ್ಷೆಗಾಗಿ ಆತನ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ತನಿಖಾ ತಂಡವು ಇಂದು ಆತನನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇನ್ನು ಪೊಲೀಸ್ ವಿಚಾರಣೆಯಲ್ಲಿ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಅಫಾನ್ ಸಾಕಷ್ಟು ಜನರಿಂದ ಹಣವನ್ನು ಸಾಲ ಪಡೆದಿದ್ದ. ಆರ್ಥಿಕ ತೊಂದರೆಗಳು ಅವರ ಕುಟುಂಬವನ್ನು ತೀವ್ರ ಕಾಡುತ್ತಿತ್ತು ಎಂದು ನೆರೆಹೊರೆಯವರು ಮತ್ತು ಆತನ ಪರಿಚಯಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ಇತ್ತೀಚೆಗೆ, ಹಣಕಾಸಿನ ಸಮಸ್ಯೆ ತೀವ್ರಗೊಂಡಿತ್ತು. ಸಾಲಗಳನ್ನು ತೀರಿಸಲು ಅಫಾನ್ ತನ್ನ ಸಂಬಂಧಿಕರಿಂದ ಹಣವನ್ನು ಸಹ ಕೇಳಿದ್ದನು. ಆದರೆ, ಹಣ ಕೊಡಲು ಸಂಬಂಧಿಕರು ನಿರಾಕರಿಸಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಅಫಾನ್, ಕೊನೆಗೆ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ. ಕೊಲೆ ನಡೆಯುವ ಎರಡು ದಿನಗಳ ಮೊದಲು, ಅಫಾನ್ ತನ್ನ ಗೆಳತಿ ಫರ್ಸಾನಾಳನ್ನು ಮನೆಗೆ ಕರೆತಂದಿದ್ದ. ಈ ವೇಳೆ ಆತನ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಫರ್ಸಾನಾ ಅಂಚಲ್ನ ಕಾಲೇಜಿನಲ್ಲಿ ಬಿಎಸ್ಸಿ ರಸಾಯನಶಾಸ್ತ್ರ ವಿದ್ಯಾರ್ಥಿನಿಯಾಗಿದ್ದಳು.
ಪ್ರಸ್ತುತ ಕೊಲೆಗೆ ಹಣಕಾಸಿನ ಸಮಸ್ಯೆಗಳಿರಬಹುದು ಎಂದು ನಾವು ಶಂಕಿಸುತ್ತೇವೆ. ಇತರ ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡಬೇಕಾಗಿದೆ ಎಂದು ಅಟ್ಟಿಂಗಲ್ ಡಿವೈಎಸ್ಪಿ ಮಂಜುಲಾಲ್ ಹೇಳಿದ್ದಾರೆ,(ಏಜೆನ್ಸೀಸ್).