ಧಾರವಾಡಕ್ಕೆ ನೀರು ಹರಿಸಿದರೆ ಹೋರಾಟ

24Huk2
Published on

ಹುಕ್ಕೇರಿ: ಬೇಸಿಗೆಯಲ್ಲಿ ತಾಲೂಕಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕೆಗಳಿಗೆ ನೀರು ಹರಿಸುವ ಕಾಮಗಾರಿ ಅವೈಜ್ಞಾನಿಕ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೫೧ ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯ ನಮ್ಮ ತಾಲೂಕಿನಲ್ಲಿದ್ದರೂ ಬೆಳಗಾವಿ, ಗೋಕಾಕ, ರಾಯಬಾಗ, ಚಿಕ್ಕೋಡಿ ಮತ್ತು ಬಾಗಲಕೋಟೆ ಜಿಲ್ಲೆ ಜನರಿಗೆ ಹೆಚ್ಚು ಪ್ರಯೋಜನವಾಗಿದೆ. ಬೇಸಿಗೆಯಲ್ಲಿ ಹುಕ್ಕೇರಿ ತಾಲೂಕಿನ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಪರದಾಡಬೇಕಾಗುತ್ತದೆ. ಹೀಗಾಗಿ, ಹುಬ್ಬಳ್ಳಿ-ಧಾರವಾಡ ಕೈಗಾರಿಕೆಗಳಿಗೆ ನೀರು ಕೊಡಲು ಸರ್ಕಾರ ಮುಂದಾದಲ್ಲಿ ತಾಲೂಕಿನ ಜನರೊಂದಿಗೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದ್ದೇನೆ. ಅವರು ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಸಮಾಲೋಚಿಸಿ ಆಗುತ್ತಿರುವ ಕಾಮಗಾರಿ ತಡೆ ಹಿಡಿಯಲು ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದರು.

ಬಣ ಬಡಿದಾಟ ಕುರಿತು ಮಾತನಾಡಿದ ಅವರು, ನಾನು ಬಿಜೆಪಿ ಬಣದವನು. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆತ್ಮೀಯ ಸ್ನೇಹಿತರು, ಬಸನಗೌಡ ಯತ್ನಾಳ ನಮ್ಮ ಹಿರಿಯರು. ನನಗೆ ಯಾವ ಬಣ ಬಡಿದಾಟ ಗೊತ್ತಿಲ್ಲ ಎಂದರು. ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯ ಹಿರೇಮಠ, ಮುಖಂಡರಾದ ಗುರುರಾಜ ಕುಲಕರ್ಣಿ, ಮಹಾವೀರ ನಿಲಜಗಿ, ಎ.ಕೆ.ಪಾಟಿಲ, ಶೀತಲ ಬ್ಯಾಳಿ, ರಾಜು ಮುನ್ನೋಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net