ಒಂದೇ ವರ್ಷದಲ್ಲಿ ಶೇ.45 ವರ್ಗಾವಣೆ: ಬೇಕಾಬಿಟ್ಟಿ ಟ್ರಾನ್ಸ್​ಫರ್, ಕಾಲೇಜು ಶಿಕ್ಷಣ ಇಲಾಖೆ ಕಮಾಲ್

College Education Department
Published on

|ವಿಲಾಸ್ ಮೇಲಗಿರಿ ಬೆಂಗಳೂರು

ಸಾಮಾನ್ಯ ವರ್ಗಾವಣೆಗೆ ಸರ್ಕಾರ ಒಪ್ಪುವುದೇ ಕಷ್ಟ. ಆದರೆ, ಕಾಲೇಜು ಶಿಕ್ಷಣ ಇಲಾಖೆ ಹಳೆ ಕಾಯ್ದೆಯನ್ನೇ ನೆಪ ಮಾಡಿಕೊಂಡು ಬೇಕಾಬಿಟ್ಟಿ ವರ್ಗಾವಣೆ ಮಾಡುತ್ತಿದೆ.

ನಾಲ್ಕು ವರ್ಷ ವರ್ಗಾವಣೆ ಮಾಡಿಲ್ಲ ಎಂಬ ನೆಪದಲ್ಲಿ 2022ರ ಜುಲೈ ಹಾಗೂ 2022ರ ಡಿಸೆಂಬರ್​ನಲ್ಲಿ ತಲಾ ಶೇ.15 ವರ್ಗಾವಣೆ ಮಾಡಿದೆ. ಈಗ ಮತ್ತೆ ಶೇ.15 ವರ್ಗಾವಣೆ ಪ್ರಕ್ರಿಯೆ ಆರಂಭಿಸಿದೆ. ಸಾಮಾನ್ಯ ವರ್ಗಾವಣೆ ನಿಯಮದನ್ವಯ ಒಟ್ಟು ವರ್ಗಾವಣೆಯಲ್ಲಿ ಶೇ.9 ಕಡ್ಡಾಯ, ಶೇ.6 ವಿಶೇಷ ವರ್ಗಾವಣೆ (ಪತಿ-ಪತ್ನಿ ಶೇ.3, ವಿಶೇಷ ಚೇತನ ಶೇ.1, ಸಿಂಗಲ್ ಪೇರೆಂಟ್ ಶೇ.1, ಮಾರಣಾಂತಿಕ ಕಾಯಿಲೆ ಶೇ.1) ವರ್ಗಾವಣೆ ಮಾಡಲಾಗುತ್ತದೆ. ವಿಚಿತ್ರವೆಂದರೆ, ಪತಿ-ಪತ್ನಿ ವರ್ಗಾವಣೆಗೆ ಪ್ರಮಾಣ ಶೇ.3ರನ್ನು ಬೇರಾವುದೇ ಇಲಾಖೆಯಲ್ಲಿ ನಿಗದಿಪಡಿಸಿಲ್ಲ. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸುಮಾರು 7000 ಬೋಧಕ ಸಿಬ್ಬಂದಿ ಇದ್ದು, ಸರಿ ಸುಮಾರು ಮೂರು ವರ್ಗಾವಣೆ ಲೆಕ್ಕ ಹಾಕಿದರೆ 3,150 ಮಂದಿ ವರ್ಗಾವಣೆಗೆ ಅವಕಾಶ ದೊರೆಯುತ್ತದೆ.

ಕಾಯ್ದೆ ತಿದ್ದುಪಡಿ ಆಗಿಲ್ಲ: ಕಾಲೇಜು ಶಿಕ್ಷಣ ಇಲಾಖೆ ವರ್ಗಾವಣೆಗೆ ಸಂಬಂಧಿಸಿದಂತೆ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರುವ ಬೇಡಿಕೆ ನನೆಗುದಿಗೆ ಬಿದ್ದಿದೆ. ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ನೃಪತುಂಗ ಮತ್ತು ಮಂಡ್ಯ ಏಕೀಕೃತ ವಿಶ್ವವಿದ್ಯಾಲಯಗಳು ನೀತಿ-ನಿಯಮ ರೂಪಿಸದೇ ವರ್ಗಾವಣೆ ಆದೇಶವನ್ನು ಮಾಡಲಾಗಿದೆ. ಈ ಮೂರು ವಿವಿಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರು ವರ್ಗಾವಣೆ ವಿಷಯಕ್ಕೆ ಬಂದರೆ ವಿವಿ ವ್ಯಾಪ್ತಿ ಮುಂದಿಡುತ್ತಾರೆ. ಬಡ್ತಿ, ವೇತನ ಬಡ್ತಿ ಇತರೆ ಸೌಲಭ್ಯಗಳು ಬಂದರೆ, ಕಾಲೇಜು ಶಿಕ್ಷಣ ಇಲಾಖೆ ಎಂದು ಪ್ರತಿಪಾದನೆ ಮಾಡುತ್ತಾರೆ. ವಿವಿಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರು ಆಪ್ಟ್ ಇನ್ ಬರೆದುಕೊಟ್ಟರೂ ಅವರಿಗೆ ಇಲಾಖೆಯಲ್ಲಿ ಜಂಟಿ ನಿರ್ದೇಶಕರ ಹುದ್ದೆಯನ್ನು ಕೊಟ್ಟು ನಿಯಮ ಉಲ್ಲಂಘನೆ ಮಾಡಿರುವ ಉದಾಹರಣೆಗಳೂ ಇವೆ.

ವರ್ಗಾವಣೆಯಾದರೂ ಹೋಗುವುದಿಲ್ಲ: ಆಪ್ಟ್ ಇನ್/ ಆಪ್ಟ್ ಔಟ್, ಒಪಿಎಸ್/ಎನ್​ಪಿಎಸ್ ನೆಪ ಮಾಡಿ ವರ್ಗಾವಣೆಗೆ ಕೋರ್ಟ್​ನಿಂದ ತಡೆಯಾಜ್ಞೆ ತಂದು ಸ್ಥಳ ಬಿಟ್ಟು ಕದಲುವುದೇ ಇಲ್ಲ. ಇದು ‘ಎ’ ವಲಯದಲ್ಲೇ ಹೆಚ್ಚಿನ ರೀತಿಯಲ್ಲಿ ನಡೆಯುತ್ತಿದೆ. ಹಾಗಾಗಿ ವರ್ಗಾವಣೆ ವ್ಯವಸ್ಥೆಯೇ ಹಳ್ಳ ಹಿಡಿದಿರುವುದು ಮೇಲ್ನೋಟಕ್ಕೇ ಸಾಬೀತಾಗಿದೆ. ಇದೆಲ್ಲ ಗೊತ್ತಿದ್ದೂ ಕಾಲೇಜು ಶಿಕ್ಷಣ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ.

ಗಂಡ-ಹೆಂಡತಿ ಹೆಸರು: ಗಂಡನ ಹೆಸರಲ್ಲೊಮ್ಮೆ ಹೆಂಡತಿ, ಹೆಂಡತಿ ಹೆಸರಲ್ಲೊಮ್ಮೆ ವರ್ಗಾವಣೆ ಸವಲತ್ತು ಪಡೆದುಕೊಳ್ಳುವವರೂ ಇಲ್ಲಿದ್ದಾರೆ. ಹೆಂಡತಿ ಹೆಸರಿನಲ್ಲಿ ಗಂಡ ಒಂದು ಬಾರಿ ಪತಿ-ಪತ್ನಿ ವರ್ಗಾವಣೆ ನಿಯಮದ ವಿನಾಯಿತಿ ಪಡೆದುಕೊಂಡರೆ ಇನ್ನೊಮ್ಮೆ ಗಂಡನ ಹೆಸರಿನಲ್ಲಿ ಹೆಂಡತಿ ವರ್ಗಾವಣಾ ವಿನಾಯಿತಿ ಭಾಗ್ಯ ಪಡೆದು ಕೊಂಡು ಬೆಂಗೂರಿನಂತಹ ‘ಎ’ ವಲಯದಲ್ಲೇ ಠಿಕಾಣಿ ಹೂಡುತ್ತಾರೆ. ಕೆಲವು ಪ್ರಾಧ್ಯಾಪಕರು ಓದಿದ್ದು, ಬೋಧನಾ ವೃತ್ತಿ ಆರಂಭಿಸಿದ್ದು, ಅಲ್ಲೇ ನಿವೃತ್ತಿ ಪಡೆದವರೂ ಇದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ವರ್ಗಾವಣೆಯಲ್ಲಿ ಪರಸ್ಪರ ವರ್ಗಾವಣೆಗೆ ಅವಕಾಶವಿಲ್ಲ. ಇದಕ್ಕಾಗಿ ಮಾಡಿಕೊಂಡ ಮನವಿಗಳು ಕಸದಬುಟ್ಟಿ ಸೇರಿವೆ.

ಹೋದ ಪುಟ್ಟ, ಬಂದ ಪುಟ್ಟ: ರಶ್ಮಿ ಮಹೇಶ್ ಕಾಲೇಜು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ಎಲ್ಲ ನಿಯೋಜನೆ ರದ್ದು ಮಾಡಿದ್ದರು. ಆದರೆ ಈಗ ಮತ್ತೆ ಹೋದ ಪುಟ್ಟ, ಬಂದ ಪುಟ್ಟ ಎನ್ನುವ ಸ್ಥಿತಿ ನಿರ್ವಣವಾಗಿದೆ.

ಅತಿಥಿ ಉಪನ್ಯಾಸಕರ ನೇಮಕ: ವರ್ಗಾವಣೆ ಆದವರು ಕೋರ್ಟ್ ತಡೆಯಾಜ್ಞೆ ತಂದು ತಾವಿದ್ದ ಸ್ಥಳದಲ್ಲೇ ಮುಂದುವರಿಯುವುದರಿಂದ ಆಯ್ಕೆ ಮಾಡಿಕೊಂಡ ಸ್ಥಳಗಳಿಗೆ ಯಾರೂ ಬರುವುದಿಲ್ಲ. ಕಾರಣ ಅಲ್ಲಿ ಅತಿಥಿ ಉಪನ್ಯಾಸಕರನ್ನು ನಿಯೋಜನೆ ಮಾಡಲಾಗುತ್ತದೆ. ಸರ್ಕಾರಕ್ಕೆ ಆರ್ಥಿಕ ಹೊರೆಯೂ ಆಗುತ್ತಿದೆ.

ಜೇಷ್ಠತೆಗೂ ಮಾನದಂಡವಿಲ್ಲ: ಅಧ್ಯಾಪಕರು ಯಾವ ಯಾವ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದಾರೆ ಅದರ ಮೇಲೆ ಜೇಷ್ಠತೆಯನ್ನು ಪರಿಗಣಿಸಬೇಕು. ಆದರೆ, ಇಲಾಖೆ ಅದನ್ನು ಗಾಳಿಗೆ ತೂರಿ ಪ್ರಸ್ತುತ ಯಾವ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದನ್ನು ಮಾತ್ರ ವರ್ಗಾವಣೆಗೆ ಪರಿಗಣಿಸುತ್ತಿದೆ. ಇದು ನಿಯಮ ಉಲ್ಲಂಘನೆಯಾಗಿದೆ. ವರ್ಗಾವಣೆ ಕಾಯ್ದೆ ಯನ್ನು ಮಾರ್ಪಾಡು ಮಾಡಿ ಎಂದು ಹಿಂದಿನ ಹಾಗೂ ಇಂದಿನ ಸಚಿವರಿಗೆ ಮನವಿ ಕೊಟ್ಟರೂ ಅದನ್ನು ಪರಿಗಣಿಸದೆ ವರ್ಗಾವಣೆ ನಡೆದಿದೆ.

ಪಾಠಕ್ಕಿಂತ ಅಧಿಕಾರದ ಮೇಲೇ ಆಸೆ: ಮಹಾರಾಣಿ ಕ್ಲಸ್ಟರ್, ನೃಪತುಂಗ ವಿ.ವಿ. ಮತ್ತು ಮಂಡ್ಯ ಏಕೀಕೃತ ವಿ.ವಿ.ಯ ಕೆಲವು ಪ್ರಾಧ್ಯಾಪಕರು ಉನ್ನತ ಶಿಕ್ಷಣ ಪರಿಷತ್ತು, ಜಂಟಿ ನಿರ್ದೇಶಕರ ಕಚೇರಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಗಳಲ್ಲಿ ಕೆಲಸ ಮಾಡಲು ಹೆಚ್ಚು ಪ್ರೀತಿ ತೋರಿಸುತ್ತಿದ್ದಾರೆ. 80ಕ್ಕೂ ಹೆಚ್ಚು ಮಂದಿ ಪ್ರಾಧ್ಯಾಪಕರು ಕಾಲೇಜು ಶಿಕ್ಷಣ ಇಲಾಖೆ, ಜಂಟಿ ನಿರ್ದೇಶಕರ ಕಚೇರಿಗಳಲ್ಲಿ ವಿಶೇಷಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 1 ಲಕ್ಷ ರೂ. ಗಳಿಂದ 3.15 ಲಕ್ಷ ರೂ.ವರೆಗಿನ ಸಂಬಳ ಪಡೆಯುವ ಅನುಭವಸ್ಥ ಪ್ರಾಧ್ಯಾಪಕರು ಬೋಧಕೇತರ ಹುದ್ದೆಯಲ್ಲಿ ಕೆಲಸ ಮಾಡುವುದರ ಬಗ್ಗೆ ಇಲಾಖೆಯಲ್ಲೇ ದೊಡ್ಡ ಅಸಮಾಧಾನವೂ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net