

ನ್ಯೂಯಾರ್ಕ್: ಮೇಲಿನ ಚಿತ್ರ ನೋಡಿದಾಗ ಈತ ಕೋಟ್ಯಧಿಪತಿಯೇ ಇರಬೇಕು ಎನ್ನಿಸೋದಂತೂ ಸತ್ಯ. ಅದು ನಿಜ ಕೂಡ. ನೂರಾರು ಕೋಟಿ ರೂ. ಮೌಲ್ಯದ ಖಾಸಗಿ ವಿಮಾನ, ಹತ್ತಾರು ಕೋಟಿ ರೂ. ಮೌಲ್ಯದ ಹತ್ತಾರು ಕಾರುಗಳು, ಲಕ್ಷಾಂತರ ಮೌಲ್ಯದ ಡಿಸೈನರ್ ಉಡುಪುಗಳು, ಐಷಾರಾಮದ ಜೀವನಶೈಲಿ...
ಈತನ ಹೆಸರು ರೇಮಂಡ್ ಅಬ್ಬಾಸ್ ಬ್ರಿಟನ್ನಲ್ಲಿ ಹುಷ್ಪಪ್ಪಿ ಎಂದು ಖ್ಯಾತನಾಗಿದ್ದ. ಐಷಾರಾಮಿ ಜೀವನಶೈಲಿಯಿಂದಾಗಿ ಇನ್ಸ್ಟಾಗ್ರಾಮ್ನಲ್ಲಿ ಈತನಿಗೆ 24 ಲಕ್ಷ ಫಾಲೋವರ್ಗಳಿದ್ದಾರೆ.
ಈತ ನೈಜೀರಿಯಾದ ಬಡ ಕುಟುಂಬಕ್ಕೆ ಸೇರಿದವನು. ಶೂ ಕೊಡಿಸಲು ಕೂಡ ತನ್ನ ಕುಟುಂಬಕ್ಕೆ ಸಾಧ್ಯವಿರಲಿಲ್ಲ ಎಂದು ಅಬ್ಬಾಸ್ ಹೇಳಿಕೊಳ್ಳುತ್ತಾನೆ. ಆರಂಭದಲ್ಲಿ ಲಾಗೋಸ್ ಹಳೆಯ ಬಟ್ಟೆಗಳ ವ್ಯಾಪಾರ ಮಾಡುತ್ತಿದ್ದ. ಬಳಿಕ ದುಬೈಗೆ ತೆರಳಿ ತನ್ನನ್ನು ತಾನು ಪ್ರಾಪರ್ಟಿ ಡೆವಲಪರ್ ಎಂದು ಬಿಂಬಿಸಿಕೊಂಡಿದ್ದ.
ಇಷ್ಟಕ್ಕೂ ಐಷಾರಾಮ ಜೀವನಕ್ಕೆ ಈತ ಹಣ ಹೊಂದಿಸಿಕೊಳ್ಳುತ್ತಿದ್ದ ಗೊತ್ತೆ? ಸೈಬರ್ ಕ್ರೈಮ್ ಮೂಲಕ. ಬ್ರಿಟನ್ನಿನ ಸಾವಿರಾರು ಜನರು ಸೇರಿ ವಿಶ್ವದ ವಿವಿಧೆಡೆಯಲ್ಲಿರುವ ಲಕ್ಷಾಂತರ ಜನರು ಈತನಿಂದ ವಂಚನೆಗೆ ಒಳಗಾಗಿದ್ದಾರೆ. 19 ಲಕ್ಷಕ್ಕೂ ಅಧಿಕ ಈ-ಮೇಲ್, ಬ್ಯಾಂಕ್ ಖಾತೆಗಳ ವಿವರ ಈತನ ಬಳಿಯಿತ್ತು ಎಂದರೆ ಈತ ಅದೆಂಥ ಸೈಬರ್ ವಂಚಕನಿರಬೇಕು ಎಂಬುದನ್ನು ನೀವೇ ಲೆಕ್ಕ ಹಾಕಿ.
ದುಬೈನಲ್ಲಿ ಈತನಿದ್ದ ಅಪಾರ್ಟ್ಮೆಂಟ್ನಲ್ಲಿ 280 ಕೋಟಿ ರೂ. ನಗದನ್ನು ಅಮೆರಿಕ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜತೆಗೆ 50 ಕೋಟಿ ರೂ. ಮೌಲ್ಯದ 13 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದಾರೆ.
ಈತನ ಬಳಿ 21 ಲ್ಯಾಪ್ಟಾಪ್ಗಳು, 47 ಸ್ಮಾರ್ಟ್ಫೋನ್ಗಳು, 15 ಮೆಮೊರಿ ಸ್ಟಿಕ್, 5 ಹಾರ್ಡ್ಡಿಸ್ಕ್, ಪೆನ್ಡ್ರೈವ್ಗಳು ಸಿಕ್ಕಿವೆ.
ಖ್ಯಾತ ಕಂಪನಿಗಳ ಹೆಸರಿನಲ್ಲಿ ನಕಲಿ ವೆಬ್ಸೈಟ್ಗಳನ್ನು ಸೃಷ್ಟಿಸುತ್ತಿದ್ದ ಈತ ಹಾಗೂ ಈತನ ತಂಡ ಜನರ ಕ್ರೆಡಿಟ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳಿಂದ ಹಣವನ್ನು ವರ್ಗಾಯಿಸಿಕೊಳ್ಳುತ್ತಿತ್ತು. ಈ ಸೈಬರ್ ವಂಚನೆಯ ಮೊತ್ತ 3,300 ಕೋಟಿ ರೂ. ಗಳಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಸದ್ಯ ಈತನನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿದ್ದು, ಅಪರಾಧ ಸಾಬೀತಾದಲ್ಲಿ 20 ವರ್ಷಗಳ ಶಿಕ್ಷೆಗೆ ಗುರಿಯಾಗಲಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.