ಪೊಲೀಸರ ಕೊಂದ ಗ್ಯಾಂಗ್​ಸ್ಟರ್​ ಮನೆ ಅವಶೇಷಗಳಡಿ ಸಿಕ್ಕ ಬಾಂಬ್​ಗಳು; ಕಾನ್ಪುರದಿಂದಲೇ ಮನೆ ಮೇಲೆ ವಿಡಿಯೋ ಕಣ್ಗಾವಲು

vikas dubey3
Published on

ಕಾನ್ಪುರ: ಸಹಚರರೊಂದಿಗೆ ಎಂಟು ಪೊಲೀಸರನ್ನು ಕೊಂದು ತಲೆಮರೆಸಿಕೊಂಡಿರುವ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಮನೆಯನ್ನು ಘಟನೆ ನಡೆದ ಎರಡನೇ ದಿನವೇ ನೆಲಸಮಗೊಳಿಸಲಾಗಿದೆ. ಈ ಮನೆಯ ಅವಶೇಷಗಳಡಿಯಲ್ಲಿ ಪೊಲೀಸರು ಬಾಂಬ್​ಗಳನ್ನು ಪತ್ತೆ ಹಚ್ಚಿದ್ದಾರೆ.

ಉತ್ತರಪ್ರದೇಶದ ಭಿಕರೂ ಗ್ರಾಮದಲ್ಲಿರುವ ವಿಕಾಸ್​ ದುಬೆಯ ಅವಶೇಷಗಳಲ್ಲಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈತನ ಮನೆಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಇದಲ್ಲದೇ, ಮನೆಯಲ್ಲಿಯೇ ಕಚ್ಚಾವಸ್ತುಗಳನ್ನು ಬಳಸಿ ಬಾಂಬ್​ ತಯಾರಿಸುತ್ತಿದ್ದ ಎಂದು ಹೇಳಲಾಗಿತ್ತು. ಇದೀಗ ಬಾಂಬ್​ ಪತ್ತೆಯಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ. ಇದಲ್ಲದೇ, ಪೊಲೀಸರು ದಾಳಿ ಬಂದಾಗ ಇಡೀ ಪ್ರದೇಶವನ್ನೇ ಸ್ಫೋಟಿಸಲು ಸಂಚು ರೂಪಿಸಿದ್ದ ಎಂದೇ ಹೇಳಲಾಗಿತ್ತು.

ಕಾನ್ಪುರದಲ್ಲೊಂದು ಮನೆ: ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಕಾನ್ಪುರದಲ್ಲೊಂದು ಮನೆ ಹೊಂದಿದ್ದಾನೆ. ಹಳ್ಳಿಯ ಮನೆಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳನ್ನು ಈ ಮನೆಯಿಂದಲೇ ವೀಕ್ಷಿಸುತ್ತಿದ್ದ. ಈತನ ಪತ್ನಿ ಕೂಡ ಮನೆಗೆ ಪೊಲೀಸರು ಬಂದ ಮಾಹಿತಿಯನ್ನು ಆತನಿಗೆ ನೀಡುತ್ತಿದ್ದಳು ಎನ್ನಲಾಗಿದೆ.

ನೇಪಾಳಕ್ಕೆ ಪರಾರಿ: ಈವರೆಗೂ ಪತ್ತೆಯಾಗದ ವಿಕಾಸ್​ ದುಬೆ ನೇಪಾಳಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈತನ ಶೋಧಕ್ಕಾಗಿ ಪೊಲೀಸರು 40 ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net