ಆಪರೇಷನ್ ಅಖಾಲ್: ಇಂದೂ ಮೂವರು ಉಗ್ರರನ್ನು ಸದೆಬಡಿದ ಭಾರತೀಯ ಸೇನೆ | Operation Akhal

ವಿಜಯವಾಣಿ - 2025-08-03T152228.237
Published on

Operation Akhal: 'ಆಪರೇಷನ್ ಅಖಾಲ್‌'ನಡಿ ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಂದೂ ಸಹ ಮೂವರು ಉಗ್ರರನ್ನು ಹೊಡೆದುರುಳಿಸಲಾಯಿತು. ಆ.03ರ ಬೆಳಗ್ಗೆ ಜಮ್ಮು-ಕಾಶ್ಮೀರದ ಕುಲ್ಗಮ್ ಜಿಲ್ಲೆಯ ಅರಣ್ಯ ಪ್ರದೇಶದ ಬಳಿ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಮೂವರು ಉಗ್ರರನ್ನು ಸೇನೆ ಸದೆಬಡಿದಿದ್ದು, ದಾಳಿಯಲ್ಲಿ ಓರ್ವ ಸೈನಿಕ ಗಾಯಗೊಂಡಿದ್ದಾರೆ.

ನಿನ್ನೆ (ಆ.02) ರಾತ್ರಿಯಿಂದ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ, ಇಂದು ಬೆಳಗ್ಗೆ ಮೂವರು ಭಯೋತ್ಪಾದಕರ ಪ್ರಾಣಪಕ್ಷಿಯನ್ನು ಹಾರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ, ಸೇನೆ ನಡೆಸಿದ ದಾಳಿಯಲ್ಲಿ ಬಲಿಯಾದ ಒಟ್ಟು ಉಗ್ರರ ಸಂಖ್ಯೆ ಇದೀಗ 6ಕ್ಕೇರಿದೆ.

"ಕುಲ್ಗಮ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಆಪರೇಷನ್ ಅಖಾಲ್ ಅನ್ನು ಪ್ರಾರಂಭಿಸಲಾಯಿತು. ಇದರ ಭಾಗವಾಗಿ, ಕಳೆದ ಎರಡು ದಿನಗಳಲ್ಲಿ ಆರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಅವರೆಲ್ಲ, 'ದಿ ರೆಸಿಸ್ಟೆನ್ಸ್ ಫ್ರಂಟ್' ಮತ್ತು 'ಲಷ್ಕರ್-ಎ-ತೈಬಾ' ಎಂಬ ಉಗ್ರ ಸಂಘಟನೆಗಳಿಗೆ ಸೇರಿದವರು ಎಂದು ಗುರುತಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net