ಬೆಂಗಳೂರು ಟೆಸ್ಟ್​ನಲ್ಲಿ Team India ಸೋಲಿಗೆ ಕಾರಣವಾದ ಮೂರು ಅಂಶಗಳು

Team India
Published on

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಭಾರತ (Team India) ಹಾಗೂ ನ್ಯೂಜಿಲೆಂಡ್​ (Newzealand) ನಡುವಿನ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾ (Team India) ತವರು ನೆಲದಲ್ಲಿ ಐತಿಹಾಸಿಕ ಸೋಲು ಕಂಡಿದ್ದು, 36 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್​ ಪಂದ್ಯವನ್ನು ಗೆಲ್ಲುವ ಮೂಲಕ ಕಿವೀಸ್​ ಪಡೆ ಹೊಸ ದಾಖಲೆ ಬರೆದಿದೆ. ಗೌತಮ್​ ಗಂಭೀರ್​ ಟೀಮ್​ ಇಂಡಿಯಾದ ಕೋಚ್​ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಮೂರನೇ ಸರಣಿ ಇದಾಗಿದ್ದು, ಭಾರತದ (Team India) ಸೋಲಿಗೆ ಹಲವು ಕಾರಣಗಳನ್ನು ಉಲ್ಲೇಖಿಸಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಸೋಲಿಗೆ ಕಾರಣವಾದ ಮೂರು ಅಂಶಗಳನ್ನು ನೋಡೋಣ ಬನ್ನಿ.

ಕ್ಯಾಪ್ಟನ್​ನ ಆ ಒಂದು ನಿರ್ಧಾರ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 25ನೇ ಟೆಸ್ಟ್​ ಪಂದ್ಯ ಇದಾಗಿದ್ದು, ಮೊದಲ ದಿನದಾಟ ಮಳೆಯಿಂದಾಗಿ ಸಂಪೂರ್ಣ ರದ್ದುಗೊಂಡಿತ್ತು. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಳ್ಳುವ ಮೂಲಕ ರೋಹಿತ್​ ಶರ್ಮ (Rohit Sharma) ದೊಡ್ಡ ತಪ್ಪು ಮಾಡಿದ್ದಾರೆ ಎಂದು ಹೇಳಲಾಗಿದೆ. ಏಕೆಂದರೆ ಬ್ಯಾಟಿಂಗ್​ಗೆ ಪಿಚ್​ ಹೆಚ್ಚು ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ರೋಹಿತ್​ ಈ ನಿರ್ಧಾರ ಕೈಗೊಂಡಿದ್ದು, ಟೀಮ್​ ಇಂಡಿಯಾ ಪಾಲಿಗೆ ಮೊದಲ ಮುಳುವಾಗಿ ಪರಿಣಮಿಸಿತು. ಮಳೆ ಬರುವ ಮುನ್ಸೂಚನೆ ಇದ್ದರೂ ನಾಯಕ ರೋಹಿತ್​ ಶರ್ಮ ಬ್ಯಾಟಿಂಗ್​ ಆಯ್ದುಕೊಂಡಿದ್ದು, ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿತು.

ಏಕೆಂದರೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಯ (Test Series) ಎರಡನೇ ಪಂದ್ಯ ಮಳೆಬಾಧಿತವಾದರೂ ಟೀಮ್​ ಇಂಡಿಯಾ (Team India) ಪಾಲಿಗೆ ವರದಾನವಾಗಿತ್ತು. ಇದರ ಸಂಪೂರ್ಣ ಲಾಭ ಪಡೆದ ಭಾರತ ತಂಡವು ಪ್ರವಾಸಿ ತಂಡದ ಎದುರು ಗೆದ್ದು ಬೀಗಿತ್ತು. ಹೀಗಾಗಿ ರೋಹಿತ್​ ಶರ್ಮ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತಾದರೂ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಹಿಟ್​ಮ್ಯಾನ್​ ಅಚ್ಚರಿ ಮೂಡಿಸಿದ್ದರು.

ರಚಿನ್​ ರವೀಂದ್ರ-ಟಿಮ್​ ಸೌಥಿ ಜತೆಯಾಟ

ನಾಲ್ಕನೇ ದಿನದಾಟ ಆರಂಭದಲ್ಲಿ ನ್ಯೂಜಿಲೆಂಡ್​ ಬ್ಯಾಟರ್​ಗಳಿಗೆ ಇನ್ನಿಲ್ಲದಂತೆ ಕಾಡಿದ ಭಾರತದ (Team India) ಬೌಲರ್​ಗಳು ತಿರುಗೇಟು ನೀಡಲು ಯತ್ನಿಸಿದರು. ಆದರೆ, ಈ ವೇಳೆ ಜತೆಯಾದ ರಚಿನ್ (Rachin) ಹಾಗೂ ಮಾಜಿ ನಾಯಕ ಟಿಮ್ ಸೌಥಿ (Tim Southee) ಭಾರತೀಯ ಬೌಲರ್​ಗಳಿಗೆ ಸವಾಲೊಡ್ಡಿದರು. ಸ್ಪಿನ್ನರ್ ಹಾಗೂ ವೇಗಿಗಳ ಎದುರು ದಿಟ್ಟ ಬ್ಯಾಟಿಂಗ್ ನಡೆಸಿ ರಚಿನ್ ಮಿಂಚಿದರು. ಇವರಿಬ್ಬರು 8ನೇ ವಿಕೆಟ್​ಗೆ ಈ ಜೋಡಿ 132 ಎಸೆತಗಳಲ್ಲಿ 137 ರನ್ ಕಸಿದರು. ರಚಿನ್ ತಾನೆದುರಿಸಿದ 124ನೇ ಎಸೆತದಲ್ಲಿ ಬೌಂಡರಿ ಬಾರಿಸಿ ಶತಕದ ಸಂಭ್ರಮ ಕಂಡರು. ಭೋಜನಾ ವಿರಾಮದ ನಂತರ ಈ ಜೋಡಿಯನ್ನು ಸಿರಾಜ್ ಬೇರ್ಪಡಿಸಿದರು. ರಚಿನ್ ಔಟ್ ಆಗುವುದರೊಂದಿಗೆ ಕಿವೀಸ್ ಮೊದಲ ಇನಿಂಗ್ಸ್ ಮುಗಿಸಿತು.

ಬ್ಯಾಟ್ಸ್​ಮನ್​ಗಳ ದಿಢೀರ್​ ಕುಸಿತ

ಸರ್ಫರಾಜ್​ ಹಾಗೂ ಪಂತ್​ ಔಟಾದ ಬಳಿಕ ಭಾರತದ ಬ್ಯಾಟ್ಸ್​ಮನ್​ಗಳು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಈ ವೇಳೆ ಕನ್ನಡಿಗ ಕೆ.ಎಲ್. ರಾಹುಲ್​ (12) ಅತ್ಯಲ್ಪ ಮೊತ್ತಕ್ಕೆ ಔಟಾಗಿದ್ದು, ಇದಲ್ಲದೆ ರವೀಂದ್ರ ಜಡೇಜಾ (5), ಆರ್.ಅಶ್ವಿನ್ (15), ಜಸ್​ಪ್ರೀತ್ ಬುಮ್ರಾ (0) ಹಾಗೂ ಮೊಹಮದ್ ಸಿರಾಜ್ (0) ಔಟಾಗುವುದರೊಂದಿಗೆ ಭಾರತದ ಬ್ಯಾಟರ್​ಗಳ ಹೋರಾಟ ಅಂತ್ಯಗೊಂಡಿತು. 107 ರನ್​ಗಳ ಗುರಿಯನ್ನು ಬೆನ್ನತ್ತಿದ್ದ ನ್ಯೂಜಿಲೆಂಡ್​ ತಂಡವು 36 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಗೆಲುವಿನ ನಗೆ ಬೀರಿತು. ಈ ಮೂರು ಅಂಶಗಳು ಭಾರತದ (Team India) ಸೋಲಿಗೆ ಪ್ರಮುಖ ಕಾರಣ ಎಂದು ಹೇಳಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net