

ಉಪ್ಪಿನಂಗಡಿ: ಗ್ರಾಮ ಪಂಚಾಯಿತಿಗಳನ್ನು ಬಲಿಷ್ಠಗೊಳಿಸಲು 15ನೇ ಹಣಕಾಸು ಅನುದಾನ ನೇರವಾಗಿ ಗ್ರಾಪಂಗೆ ನೀಡಲಾಗುತ್ತಿದೆ. ಜೆಜೆಎಂ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಂಡಿದೆ. ದ.ಕ. ಜಿಲ್ಲೆಯೊಂದರಲ್ಲೇ 2,500 ಕೋಟಿ ರೂ. ಅನುದಾನ ಜಲಜೀವನ್ ಯೋಜನೆಗೆ ಖರ್ಚು ಮಾಡಲಾಗುತ್ತಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, 15ನೇ ಹಣಕಾಸು ಮತ್ತು ಗ್ರಾಮ ಪಂಚಾಯಿತಿ ಸ್ವಂತ ನಿಧಿಯಡಿಯಲ್ಲಿ ನಿರ್ಮಿಸಲಾದ ನೆಲ್ಯಾಡಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ‘ಗ್ರಾಮ ಸೌಧ’ದ ಉದ್ಘಾಟನೆ ವೇಳೆ ನಾಮಫಲಕ ಅನಾವರಣಗೊಳಿಸಿ ಮಂಗಳವಾರ ಮಾತನಾಡಿದರು.
ಗ್ರಾಮಸೌಧ ಕಟ್ಟಡವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಕಿಶೋರ್ಕುಮಾರ್, ಕಡಬ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ಕುಮಾರ್ ಭಂಡಾರಿ, ಗ್ರಾಪಂ ಅಧ್ಯಕ್ಷ ಸಲಾಂ ಬಿಲಾಲ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ವಾಹಣಾಧಿಕಾರಿ ವಿನಯಕುವಾರಿ, ಕಡಬ ತಾಪಂ ಸಹಾಯಕ ನಿರ್ದೇಶಕ ಸಂದೇಶ್ ಕೆ.ಎನ್., ಗ್ರಾಪಂ ಉಪಾಧ್ಯಕ್ಷೆ ರೇಷ್ಮಾಶಶಿ, ನರೇಗಾ ಯೋಜನೆ ತಾಂತ್ರಿಕ ಸಹಾಯಕ ಮನೋಜ್ಕುವಾರ್, ಪಂಚಾಯತ್ರಾಜ್ ಇಲಾಖೆ ಇಂಜಿನಿಯರ್ ಸಂಗಪ್ಪ ಎಸ್.ಹುಕ್ಕೇರಿ ಉಪಸ್ಥಿತರಿದ್ದರು. ಪಿಡಿಒ ಮೋಹನ್ ಕುಮಾರ್ ಜಿ. ಸ್ವಾಗತಿಸಿದರು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ. ನಿರೂಪಿಸಿದರು. ರವಿಪ್ರಸಾದ್ ಶೆಟ್ಟಿ ವಂದಿಸಿದರು.