ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಶಾಸಕರ ಪಿಂಚಣಿ, ವೈದ್ಯಕೀಯ ಭತ್ಯೆ ಹೆಚ್ಚಳ ಮಾಡಿರುವುದಕ್ಕೆ ಮಾಜಿ ಶಾಸಕರಾದ ವಿಜಯಕುಮಾರ್ ಶೆಟ್ಟಿ ಅಭಿನಂದಿಸಿದ್ದಾರೆ. ನಿಸ್ವಾರ್ಥವಾಗಿ ಜನ ಸೇವೆ ಮಾಡಿದ ಈ ಮಾಜಿ ಜನಪ್ರತಿನಿಧಿಗಳನ್ನು ಮುಖ್ಯಮಂತ್ರಿಗಳು ಮರೆತಿಲ್ಲ. ಸದಾ ಅವರ ಯೋಗಕ್ಷೇಮಕ್ಕೆ ಆದ್ಯತೆ ನೀಡಿದ್ದಾರೆ ಎಂದು ಶ್ಲಾಸಿದ್ದಾರೆ. ಇದೇ ಸಂದರ್ಭ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಅವರು ಸ್ಪೀಕರ್ ಆಗಿ ಪ್ರಭುದ್ದತೆಯನ್ನು ತೋರುತ್ತಿದ್ದು, ರಾಜ್ಯ ಪ್ರಥಮ ಅಲ್ಪಸಂಖ್ಯಾತ ಮುಖ್ಯಮಂತ್ರಿಗಳಾಗುವ ಎಲ್ಲಾ ಅರ್ಹತೆಯನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಮಂಗಳೂರಿನ ರಸ್ತೆಗಳಲ್ಲಿ ಪ್ರತಿಭಟನೆ ಮಾಡುವ ಮೂಲಕ ಬಿಜೆಪಿ ಜನರಿಗೆ ತೊಂದರೆ ಕೊಡುವ ಮೂಲಕ ಸಂಭ್ರಮಿಸುತ್ತಿದೆ. ಪ್ರತಿಭಟನೆಗೆ ಮೀಸಲಾದ ಜಾಗದಲ್ಲಿ ಪ್ರತಿಭಟನೆ ಮಾಡಬೇಕು, ಇಲ್ಲದಿದ್ದಲ್ಲಿ ಅನುಮತಿ ನೀಡದೆ ಪೊಲೀಸ್ ಇಲಾಖೆ ಕಠಿಣ ಆದೇಶ ಜಾರಿ ಮಾಡಬೇಕು ಎಂದು ವಿಜಯಕುಮಾರ್ ಶೆಟ್ಟಿ ಒತ್ತಾಯಿಸಿದ್ದಾರೆ.