

ಮಂಗಳೂರು: ಕಾವೂರು ಅಂಬಿಕಾ ನಗರದ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಫಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯುವ ಭಾಗವತ ಸಪ್ತಾಹವನ್ನು ದಿಯಾ ಸಿಸ್ಟಮ್ ನ ಅಧ್ಯಕ್ಷೆ ಇಂದಿರಾ ರವಿಚಂದ್ರನ್ ಉದ್ಘಾಟಿಸಿ, ಶುಭ ಹಾರೈಸಿದರು.
ಪಲಿಮಾರು ಮಠಾಧೀಶರಿಂದ ಶ್ರೀಮದ್ ಭಾಗವತ ಪ್ರವಚನ ಕಾರ್ಯಕ್ರಮ ಪ್ರತಿದಿನ ಸಂಜೆ 5.30 ರಿಂದ 7ರ ತನಕ ಕಾವೂರು ಶ್ರೀ ರಾಘವೇಂದ್ರ ಮಠದಲ್ಲಿ ಜರಗುತ್ತಿದೆ. ಏ. 20ರ ತನಕ ನಡೆಯುವ ಶ್ರೀಮದ್ ಭಾಗವತ ಸಪ್ತಾಹದ ಪ್ರತಿದಿನವೂ ಸಪ್ತಾಹ ಪ್ರಾರಂಭವಾಗುವ ಮೊದಲು ಭಜನಾ ಸಂಕೀರ್ತನೆಯನ್ನು ವಿವಿಧ ಭಜನಾ ತಂಡದವರು ನೆರವೇರಿಸಲಿದ್ದಾರೆ.
ವಿದ್ವಾನ್ ಶೇಷಗಿರಿ ಆಚಾರ್ಯ, ರಾಜಲಕ್ಷ್ಮಿ, ಆಕಾಶವಾಣಿ ನಿಲಯ ನಿರ್ದೇಶಕ ಸೂರ್ಯನಾರಾಯಣ ಭಟ್ ಉಪಸ್ಥಿತರಿದ್ದರು. ಕಾವೂರು ಶ್ರೀ ರಾಘವೇಂದ್ರ ಮಠದ ಸುದರ್ಶನ ಬನ್ನಿಂತಾಯರು ಪ್ರಸ್ತಾವನೆಗೈದು ಸ್ವಾಗತಿಸಿದರು. ಸಂಯೋಜಕ ಸುಧಾಕರ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.