ಮುನ್ನೆಚ್ಚರಿಕೆ ಅಗತ್ಯ: ವಿಶ್ವದಲ್ಲಿ 25.8 ಕೋಟಿ ಜನರಿಗೆ ಆಹಾರ ಕೊರತೆ

Food Shortage
Published on

ಕಳೆದ ವರ್ಷ ವಿಶ್ವದ 58 ದೇಶಗಳ 25.8 ಕೋಟಿ ಜನರು ಆಹಾರ ಕೊರತೆ ಎದುರಿಸಿದ್ದರು ಎಂದು ವಿಶ್ವ ಸಂಸ್ಥೆಯ ವರದಿ ಹೇಳಿದೆ. ವಿಶ್ವದ ಒಟ್ಟಾರೆ ಜನಸಂಖ್ಯೆ ಅಂದಾಜು 800 ಕೋಟಿ ಇದ್ದು, ಇದರಲ್ಲಿ 25.8 ಕೋಟಿ ಅಂದರೆ ಶೇ. 3.22 ರಷ್ಟು ಜನರು ಹಸಿವೆಯಿಂದ ಬಳಲಿದ್ದರು ಎಂಬುದು ಕಳವಳಕಾರಿ ಸಂಗತಿಯಾಗಿದೆ. ಸೊಮಾಲಿಯಾ, ಅಫ್ಘಾನಿಸ್ತಾನ, ರ್ಬುನಾ ಫಾಸೊ, ಹೈಟಿ, ನೈಜೀರಿಯಾ, ದಕ್ಷಿಣ ಸುಡಾನ್, ಯೆಮೆನ್- ಈ ಏಳು ದೇಶಗಳಲ್ಲಿ ಜನರು ಹಸಿವಿನಿಂದ ಬಳಲುತ್ತಿದ್ದು, ಆಹಾರ ಕೊರತೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಪ್ರಸ್ತಾಪಿಸಿರುವುದು ಖೇದಕರ ವಿಷಯವಾಗಿದೆ. ಆಹಾರದ ಅಭದ್ರತೆ ಎದುರಿಸುತ್ತಿರುವ ಜನರ ಸಂಖ್ಯೆ ಸತತ ನಾಲ್ಕನೇ ವರ್ಷ ಹೆಚ್ಚಳ ಕಂಡಿದೆ. ಹೀಗಾಗಿ, ವಿಶ್ವ ಹಸಿವನ್ನು ಕೊನೆಗೊಳಿಸುವ ವಿಶ್ವ ಸಂಸ್ಥೆಯ ಗುರಿಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮಾನವೀಯತೆಯ ವೈಫಲ್ಯವನ್ನು ಇದು ತೋರಿಸುತ್ತದೆ ಎಂದು ವಿಶ್ವ ಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಬೇಸರ ವ್ಯಕ್ತಪಡಿಸಿದ್ದಾರೆ. ಹವಾಮಾನ ಬದಲಾವಣೆ, ಕೋವಿಡ್ ವೈರಸ್ ಸಾಂಕ್ರಾಮಿಕ ಮತ್ತು ಯೂಕ್ರೇನ್- ರಷ್ಯಾ ಯುದ್ಧದ ಪರಿಣಾಮಗಳಿಂದಾಗಿ 2022ರಲ್ಲಿ ತೀವ್ರ ಆಹಾರದ ಕೊರತೆ ತಲೆದೋರಿತ್ತು ಎಂದೂ ವರದಿಯಲ್ಲಿ ಹೇಳಲಾಗಿದೆ. ಹವಾಮಾನ ಬದಲಾವಣೆ ಸಮಸ್ಯೆ, ಯೂಕ್ರೇನ್- ರಷ್ಯಾ ಯುದ್ಧ ಹಾಗೆಯೇ ಮುಂದುವರಿದಿದೆ. ಕೋವಿಡ್ ನಿಯಂತ್ರಣಕ್ಕೆ ಬಂದಿದ್ದರೂ ಸಂಪೂರ್ಣ ಮಾಯವಾಗಿಲ್ಲ. ಈ ಎಲ್ಲ ವಾಸ್ತವಗಳ ಹಿನ್ನೆಲೆಯಲ್ಲಿ ಈ ವರ್ಷವೂ ಆಹಾರ ಕೊರತೆಯನ್ನು ಸಾಕಷ್ಟು ಜನರು ಎದುರಿಸಬೇಕಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಭಾರತವು ಆರ್ಥಿಕವಾಗಿ ಸಾಕಷ್ಟು ಪ್ರಗತಿ ಹೊಂದಿ ಜಾಗತಿಕವಾಗಿ 5ನೇ ಅತಿದೊಡ್ಡ ಆರ್ಥಿಕತೆಯಾಗಿ ರೂಪುಗೊಂಡಿದೆ. ಪ್ರಸ್ತುತ ಇಡೀ ವಿಶ್ವದಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಬಡತನದ ಪ್ರಮಾಣ ಸಾಕಷ್ಟು ಇಳಿಮುಖವಾಗಿರುವುದರ ಸ್ಪಷ್ಟ ಸೂಚನೆ ಇದಾಗಿದೆ. ಹಿಂದಿನ ದಶಕಗಳಲ್ಲಿ ಹಸಿರು ಕ್ರಾಂತಿ ಹಾಗೂ ಕೃಷಿ ಇಳುವರಿಗೆ ಆದ್ಯತೆ ನೀಡಿದ ಪರಿಣಾಮವಾಗಿ ಭಾರತ ಈಗ ಬಹುತೇಕವಾಗಿ ಆಹಾರ ಸ್ವಾವಲಂಬಿ ರಾಷ್ಟ್ರವಾಗಿ ರೂಪುಗೊಂಡಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಬಡವರಿಗೆ ಆಹಾರ ಧಾನ್ಯವನ್ನು ಒದಗಿಸುತ್ತಿರುವುದರಿಂದ ಹಸಿವಿನಿಂದ ಬಳಲುವವರ ಹಾಗೂ ಸಾವನ್ನಪ್ಪಿದ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ನಗಣ್ಯವಾಗಿವೆ.

ಪ್ರಸ್ತುತ ಯೂಕ್ರೇನ್- ರಷ್ಯಾ ಯುದ್ಧದ ಪರಿಣಾಮವಾಗಿ ಆಹಾರ ಆಮದನ್ನು ಅವಲಂಬಿಸಿರುವ ಬಡ ದೇಶಗಳಲ್ಲಿ ಆಹಾರ ಕೊರತೆ ತೀವ್ರವಾಗಿ ಬಾಧಿಸಿದ್ದರೂ ಭಾರತಕ್ಕೆ ಹೆಚ್ಚು ತೊಂದರೆಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಭಾರತದ ಆಹಾರ ಧಾನ್ಯಗಳ ಉತ್ಪಾದನೆಯು 2021-22ನೇ ಹಣಕಾಸು ವರ್ಷದಲ್ಲಿ ದಾಖಲೆಯ 315.7 ದಶಲಕ್ಷ ಟನ್ ತಲುಪಿದೆ. ಆದರೆ, ನಮಗಿಂತಲೂ ಕಡಿಮೆ ಜನಸಂಖ್ಯೆ ಇರುವ ಚೀನಾ ಇದೇ ಅವಧಿಯಲ್ಲಿ 662 ದಶಲಕ್ಷ ಟನ್ ಆಹಾರ ಧಾನ್ಯ ಉತ್ಪಾದಿಸಿರುವುದು ಗಮನಾರ್ಹವಾಗಿದೆ. ಅನಾವೃಷ್ಟಿ, ಅತಿವೃಷ್ಟಿ, ಪ್ರವಾಹ ಮುಂತಾದ ಪ್ರತಿಕೂಲ ಹವಾಮಾನದಿಂದಾಗಿ ಬೆಳೆ ನಷ್ಟವುಂಟಾಗಿ ರೈತರು ಆರ್ಥಿಕ ತೊಂದರೆಗೆ ಸಿಲುಕುವುದು ಭಾರತದಲ್ಲಿ ಸಾಮಾನ್ಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ತಲೆದೋರಬಹುದಾದ ಆಹಾರ ಕೊರತೆ ನಿಭಾಯಿಸಲು ಮುನ್ನೆಚ್ಚರಿಕೆಯ ಅಗತ್ಯವಿದೆ. ಆಹಾರ ಧಾನ್ಯಗಳನ್ನು ಬೆಳೆಯುವ ರೈತರ ಬದುಕು ಸ್ವಾಲಂಬಿಯಾಗಿಸುವ ನಿಟ್ಟಿನಲ್ಲಿ ಕೃಷಿಯನ್ನು ಲಾಭದಾಯಕ ವಲಯವನ್ನಾಗಿ ರೂಪಿಸುವ ಸವಾಲು ಕೂಡ ಆಡಳಿತಗಾರರ ಮುಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net