ಕುದುರೆಗೆ ಬಲವಂತವಾಗಿ ಗಾಂಜಾ ಸೇವನೆ ಮಾಡಿಸಿ ವಿಕೃತಿ ಮೆರೆದ ಯುವಕರು

horse smoke (1)
Published on

ಉತ್ತರಾಖಂಡ: ಯಾತ್ರಿಕರನ್ನು ಹೊತ್ತೊಯ್ಯುವ ಕುದುರೆಗೆ ಯುವಕರಿಬ್ಬರು ಬಲವಂತವಾಗಿ ಗಾಂಜಾ ಸೇವನೆ ಮಾಡಿಸಿರುವ ವಿಕೃತ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

ಘಟನೆಯು ಹಿಂದೂಗಳ ಪವಿತ್ರ ಸ್ಥಳವಾದ ಕೇದಾರನಾಥ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ನಡೆದಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಾಣಿ ಪ್ರಿಯರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈ ಕೃತ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ವಿಡಿಯೋದಲ್ಲಿ ಏನಿದೆ?
ಕುದುರೆಯ ಪಾಲನೆ ಮಾಡುವ ಯುವಕರಿಬ್ಬರು ಕುದುರೆಯನ್ನು ಹಿಡಿದುಕೊಂಡು ಬಲವಂತವಾಗಿ ಅದರ ಬಾಯಿ ಹಾಗೂ ಮೂಗಿನ ಒಂದು ಹೊಳ್ಳೆಯನ್ನು ಕೈಯಿಂದ ಮುಚ್ಚಿದ್ದಾರೆ. ನಂತರ ಗಾಂಜಾವನ್ನು ಕುದುರೆಯ ಮತ್ತೊಂದು ಹೊಳ್ಳೆಯ ತುದಿಗೆ ಇಟ್ಟು ಒತ್ತಾಯ ಪೂರ್ವಕವಾಗಿ ಧೂಮಪಾನ ಮಾಡಿಸಿದ್ದಾರೆ.

ಇಂತಹ ಮಾದಕವಸ್ತು ಸೇವಿಸುವ ಕುದುರೆಗಳನ್ನು ಏರುವ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳ ಸುರಕ್ಷತೆ ಬಗ್ಗೆ ನೆಟ್ಟಿಗರು ಪ್ರಶ್ನೆಯನ್ನು ಎತ್ತಿದ್ದಾರೆ. ಯುವಕರ ಈ ಹಿಂಸಾ ಕೃತ್ಯವು ವೈರಲ್​ ಆದ ಕೂಡಲೇ ಉತ್ತರಾಖಂಡ ಪೊಲೀಸರು, ಕುದುರೆಗೆ ಬಲವಂತವಾಗಿ ಧೂಮಪಾನ ಮಾಡಿಸುತ್ತಿರುವ ಯುವಕರಿಬ್ಬರ ಅಮಾನವೀಯ ಕೃತ್ಯವು ನಮ್ಮ ಗಮನಕ್ಕೆ ಬಂದಿದೆ. ಈ ವಿಡಿಯೋದಲ್ಲಿನ ವ್ಯಕ್ತಿಗಳಿಗಾಗಿ ಶೋಧ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಉತ್ತರಾಖಂಡದಲ್ಲಿ ಸಾಕು ಪ್ರಾಣಿಗಳ ಪಾಡು ತೀವ್ರ ದುಃಖಕರವಾಗಿದ್ದು, ಚಾರ್ಧಾಮ್ ಯಾತ್ರೆಯಲ್ಲಿ ಯಾತ್ರಾರ್ಥಿಗಳನ್ನು ಗಮ್ಯಸ್ಥಾನಗಳಿಗೆ ಹೊತ್ತೊಯ್ಯುವ ಕತ್ತೆ ಮತ್ತು ಕುದುರೆಗಳನ್ನು ನಿರ್ವಾಹಕರು ನಿರ್ಲಕ್ಷ್ಯದಿಂದ ನಡೆಸಿಕೊಳ್ಳುವುದರ ಜತೆಗೆ ಹಲ್ಲೆ ಮಾಡುತ್ತಿದ್ದಾರೆ. ಪ್ರಾಣಿ ಪ್ರಿಯರು, ಪ್ರಾಣಿಗಳ ಮೇಲೆ ನಡೆದ ಕ್ರೌರ್ಯದ ಮೇಲೆ ಬೆಳಕು ಚೆಲ್ಲಿದ್ದು ಕುದುರೆಗಳನ್ನು ಉಳಿಸಿ ಎಂಬ ಅಭಿಯಾನವನ್ನು ಪ್ರಾರಂಭಿಸಿವೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net