

ಶ್ರೀನಗರ: ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರಿಬ್ಬರ ಜತೆಗೆ ಒಬ್ಬ ಪೊಲೀಸ್ ಕೂಡ ಹುತಾತ್ಮರಾಗಿರುವ ಪ್ರಕರಣ ನಡೆದಿದೆ. ಜಮ್ಮು-ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.
ಯೋಧರಾದ ಕರ್ನಲ್ ಮನ್ಪ್ರೀತ್ ಸಿಂಗ್ ಹಾಗೂ ಮೇಜರ್ ಆಶಿಸ್ ಧೊಂಚಕ್ ಮತ್ತು ಡಿವೈಎಸ್ಪಿ ಹಿಮಾನ್ಯುಂ ಮುಜಾಮಿಲ್ ಭಟ್ ಹುತಾತ್ಮರಾದವರು. ಮನ್ಪ್ರೀತ್ ಸಿಂಗ್ ರಾಜಸ್ಥಾನ್ ರೈಫಲ್ಸ್ ಸಂಘಟನೆಯ ಕಮಾಂಡಿಂಗ್ ಆಫೀಸರ್.
ಅನಂತ್ನಾಗ್ನ ದಟ್ಟ ಕಾಡಿನಲ್ಲಿ ಉಗ್ರರ ಗುಂಡಿನ ದಾಳಿಯ ನಡುವೆಯೂ ಪೊಲೀಸ್ ಅಧಿಕಾರಿಯ ಶವವನ್ನು ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಉಗ್ರರ ನುಸುಳಿರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸೇನೆ ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಗೆ ಮುಂದಾಗಿದ್ದರು. ಈ ಕಾರ್ಯಾಚರಣೆಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ. ಇನ್ನೊಂದೆಡೆ ಇಬ್ಬರು ಉಗ್ರರು ಕೂಡ ಹತರಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.