

ನವದೆಹಲಿ: ಚೀನಾದ ಕೋಸ್ಟ್ ಆಚೆಗೆ ಸಿಕ್ಕಿಹಾಕಿಕೊಂಡಿದ್ದ ಹಡಗಿನ 18 ಜನ ಭಾರತೀಯ ಸೇಲರ್ಗಳು ಶೀಘ್ರವೇ ಅವರ ಮನೆ ಸೇರಲಿದ್ದಾರೆ. 2020ರ ಸೆಪ್ಟೆಂಬರ್ನಿಂದ ಸಿಕ್ಕಿಹಾಕಿಕೊಂಡಿದ್ದವರು, ಹಡಗಿನಲ್ಲಿ ವಾಪಸ್ ಪಯಣಿಸುತ್ತಿದ್ದು, ಫೆಬ್ರವರಿ 14 ಕ್ಕೆ ಭಾರತವನ್ನು ತಲುಪಲಿದ್ದಾರೆ ಎಂದು ಕೇಂದ್ರ ಸಚಿವ ಮನಸುಖ್ ಮಾಂಡವೀಯ ಹೇಳಿದ್ದಾರೆ.
“ಚೀನಾದಲ್ಲಿ ಸಿಕ್ಕಿಹಾಕಿಕೊಂಡಿದ್ದ ಎಂವಿ ಅನಸ್ತೇಷಿಯಾದ 18 ಭಾರತೀಯ ಸಮುದ್ರಯಾತ್ರಿಗಳು ಭಾರತಕ್ಕೆ ಬರುತ್ತಿದ್ದಾರೆ. ಇಂದು (ಫೆಬ್ರವರಿ 10) ಜಪಾನ್ನಿಂದ ಹೊರಡಲಿದ್ದು, ಫೆಬ್ರವರಿ 14 ಕ್ಕೆಭಾರತ ತಲುಪಲಿದ್ದಾರೆ" ಎಂದು ಪೋರ್ಟ್ಸ್ ಶಿಪ್ಪಿಂಗ್ ಮತ್ತು ವಾಟರ್ವೇಸ್ ಸಚಿವರಾದ ಮಾಂಡವೀಯ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಚೀನಾದಲ್ಲಿನ ಭಾರತೀಯ ಎಂಬೆಸಿ ಮಾಡಿದ ಯತ್ನಗಳನ್ನು ಪ್ರಶಂಸಿಸಿರುವ ಮಾಂಡವೀಯ ಅವರು, ಅವರ ಪುನರಾಗಮನವನ್ನು ವ್ಯವಸ್ಥೆಗೊಳಿಸಿದ ಮೆಡಿಟರೇನಿಯನ್ ಶಿಪ್ ಕಂಪೆನಿಗೂ ಧನ್ಯವಾದ ಹೇಳಿದ್ದಾರೆ. ಈ ಮುನ್ನ ಚೀನಾದಲ್ಲಿ ಸಿಕ್ಕಿಹಾಕಿಕೊಂಡಿದ್ದ ಎಂವಿ ಜಗ್ ಆನಂದ್ ಹಡಗಿನ 23 ಸಮುದ್ರಯಾತ್ರಿಗಳು ಜನವರಿ 14 ರಂದು ಭಾರತ ತಲುಪಿದ್ದರು.(ಏಜೆನ್ಸೀಸ್)