

ಒಟ್ಟಾವಾ: ಕೆನಡಾದಲ್ಲಿ ಕಳೆದ ಮೂವತ್ತು ವರ್ಷಗಳ ಇತಿಹಾಸದಲ್ಲೇ ಅತಿ ಭೀಕರವಾದ ಶೂಟೌಟ್ ಭಾನುವಾರ ನಡೆದಿದ್ದು, 16 ಜನ ಅದಕ್ಕೆ ಬಲಿಯಾಗಿದ್ದಾರೆ. ಕೆನಡಾದ ನೋವಾ ಸ್ಕೋಟಿಯಾ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬ ನಡೆಸಿದ ಶೂಟ್ಔಟ್ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ರೀತಿಯಲ್ಲಿ ನೋವಾ ಸ್ಕೋಟಿಯಾ ಪ್ರಾಂತ್ಯದ ಹಾಲಿಫ್ಯಾಕ್ಸ್ ನ ಉತ್ತರಕ್ಕೆ 60 ಮೈಲಿ ದೂರದ ಪೋರ್ಟಾಪಿಕ್ ಎಂಬ ಪುಟ್ಟ ಗ್ರಾಮೀಣ ಪಟ್ಟಣದಲ್ಲಿ ದುಷ್ಕರ್ಮಿ ಭಾನುವಾರ ತಡರಾತ್ರಿ ಈ ಕೃತ್ಯವೆಸಗಿದ್ದಾನೆ. ಅಲ್ಲಿನ ಮನೆಯೊಂದರ ಹೊರಗೆ ಅನೇಕ ಶವಗಳು ಸಿಕ್ಕಿವೆ. ಆ ದುಷ್ಕರ್ಮಿಯನ್ನು ಶರಣಾಗಿಸುವ ಪ್ರಯತ್ನದಲ್ಲಿ ವಿಫಲರಾದ ಪೊಲೀಸರು ಆತನನ್ನು ಕೂಡ ಹತ್ಯೆಗೈದಿದ್ದಾರೆ.
ದುಷ್ಕರ್ಮಿಯನ್ನು ಗೇಬ್ರಿಯಲ್ ವೋರ್ಟ್ಮನ್ (51) ಎಂದು ಪೊಲೀಸರು ಗುರುತಿಸಿದ್ದಾರೆ. ಆತ ಪೋರ್ಟಾಪಿಕ್ನಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದ. ಪೊಲೀಸರಂತೆ ವೇಷ ಧರಿಸಿದ್ದಲ್ಲದೆ, ಕಾರನ್ನು ಕೂಡ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಕ್ರೂಸರ್ ತರ ಬದಲಾಯಿಸಿಕೊಂಡಿದ್ದ. ಬಹುಶಃ ಈತ ಮೊದಲ ತನ್ನ ಹಿಟ್ಲಿಸ್ಟ್ನಲ್ಲಿದ್ದವರನ್ನು ಹತ್ಯೆ ಮಾಡಿ ಬಳಿಕ ಒಟ್ಟಾರೆ ಶೂಟ್ಔಟ್ ಮಾಡಿದ್ದಾನೆಂದು ಪೊಲೀಸರು ಶಂಕಿಸಿದ್ದಾರೆ.
ಆರಂಭದಲ್ಲಿ ಪೊಲೀಸರು ವೋರ್ಟ್ಮನ್ನನ್ನು ಬಂಧಿಸಿರುವುದಾಗಿ ಘೋಷಿಸಿದರಾದರೂ, ತರುವಾಯ ಆತ ಮೃತಪಟ್ಟ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆದರೆ, ಆತ ಹೇಗೆ ಸತ್ತ ಎಂಬುದರ ಕುರಿತಾಗಲೀ, ತಮ್ಮ ಹೇಳಿಕೆಯ ಕುರಿತಾಗಲೀ ವಿವರಣೆಯನ್ನು ನೀಡಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)