ವುಹಾನ್​ನಲ್ಲಿ ಕರೊನಾ ಮಾನವ ನಿರ್ವಿುತ: ಅಲ್ಲೋಲಕಲ್ಲೋಲ ಸೃಷ್ಟಿಸಿದ ನೊಬೆಲ್ ಪುರಸ್ಕೃತ ವೈರಾಣು ತಜ್ಞನ ಹೇಳಿಕೆ

Luke
Published on

ನವದೆಹಲಿ: ಕರೊನಾ ವೈರಸ್ ಚೀನಾದ ವುಹಾನ್​ನ ಪ್ರಯೋಗಾಲಯವೊಂದರಲ್ಲಿ ಸೃಷ್ಟಿಸಿದ ಮಾನವ ನಿರ್ವಿುತ ವೈರಸ್ ಎಂದು ಫ್ರಾನ್ಸ್​ನ ಖ್ಯಾತ ವೈರಾಣು ತಜ್ಞ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಲ್ಯೂಕ್ ಮೊಂಟಾಗ್ನಿಯರ್ ಹೇಳಿಕೆ ಜಗತ್ತಿನಾದ್ಯಂತ ವಿಜ್ಞಾನ ರಂಗದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿದೆ.

ವುಹಾನ್​ನ ಪ್ರಯೋಗಾಲಯ ವೊಂದರಲ್ಲಿ ಎಚ್​ಐವಿ/ಏಡ್ಸ್ ರೋಗಕ್ಕೆ ಲಸಿಕೆ ತಯಾರಿಸಲು ಪ್ರಯತ್ನಿಸುತ್ತಿದ್ದಾಗ ಸಾರ್ಸ್-ಸಿಒವಿ-2 ವೈರಸ್ ಸೃಷ್ಟಿಯಾಗಿದೆ. ಆದ್ದರಿಂದಲೇ ಜಗತ್ತಿನೆಲ್ಲೆಡೆ ಸಾಂಕ್ರಾಮಿಕ ರೋಗ ಹರಡಿದೆ. ಹೀಗಾಗಿ ಇದು ‘ಮಾನವ ನಿರ್ವಿುತ’ ಎಂದು ಮಾಂಟಾಗ್ನಿಯರ್ ವಿಶ್ಲೇಷಿಸಿದ್ದಾರೆ.

‘ಕರೊನಾ ವೈರಸ್​ನ ಜೀವಜಾಲದಲ್ಲಿ (ಜಿನೊಮ್ ಎಚ್​ಐವಿ ಅಂಶಗಳು ಮತ್ತು ಮಲೇರಿಯಾ ಕೀಟಾಣು ಉನ್ನತ ಪ್ರಮಾಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿವೆ. ವೈರಸ್​ನ ಗುಣಲಕ್ಷಣಗಳನ್ನು ನೋಡಿದರೆ ಅದು ಪ್ರಕೃತಿಸಹಜವಾಗಿ ಹುಟ್ಟಿದ್ದು ಎನ್ನಲಾಗದು’ ಎಂದು ಮೊಂಟಾಗ್ನಿಯರ್ ಹೇಳಿದ್ದಾರೆ. ವುಹಾನ್ ನ್ಯಾಷನಲ್ ಬಯೋಸೇಫ್ಟಿ ಪ್ರಯೋಗಾಲಯದಲ್ಲಿ ಒಂದು ‘ಕೈಗಾರಿಕಾ’ ಅವಘಡ ಸಂಭವಿಸಿರಬೇಕು ಎಂಬುದು ಅವರ ತರ್ಕ. ಈ ಪ್ರಯೋಗಾಲಯ 2000ದ ಆಂಭದಿಂದಲೂ ಈ ಕರೊನಾ ವೈರಸ್​ಗಳ ವಿಚಾರದಲ್ಲಿ ವಿಶೇಷವಾದ ಪ್ರಯೋಗಗಳನ್ನು ನಡೆಸುತ್ತಿದೆ. ಫ್ರೆಂಚ್ ಸುದ್ದಿ ವಾಹಿನಿಯೊಂದಿಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಚ್​ಐವಿ/ಏಡ್ಸ್ ವೈರಸ್ ಕಂಡು ಹಿಡಿದ ಸಹಸಂಶೋಧನೆಗೆ ಮೊಂಟಾಗ್ನಿಯರ್ ಇತರ ಇಬ್ಬರು ವಿಜ್ಞಾನಿಗಳೊಂದಿಗೆ 2008ರಲ್ಲಿ ನೊಬೆಲ್ ಪ್ರಶಸ್ತಿ ಹಂಚಿಕೊಂಡಿದ್ದಾರೆ.

ವುಹಾನ್ ಲ್ಯಾಬ್ ನಿರಾಕರಣೆ

ಕರೊನಾ ವೈರಸ್ ಹರಡಲು ತಮ್ಮ ಪ್ರಯೋಗಾಲಯ ಕಾರಣವೆಂಬ ಆರೋಪವನ್ನು ವುಹಾನ್​ನ ರಕ್ಷಣಾ ಲ್ಯಾಬ್ ಸ್ಪಷ್ಟವಾಗಿ ತಳ್ಳಿಹಾಕಿದೆ. ‘ಈ ರೀತಿ ಆಗಲು ಸಾಧ್ಯವೇ ಇಲ್ಲ’ ಎಂದು ಪ್ರಯೋಗಾಲಯದ ನಿರ್ದೇಶಕ ಯುವಾನ್ ಜಿಮಿಂಗ್ ಸ್ಪಷ್ಟಪಡಿಸಿದ್ದಾರೆ. ಚೀನಾವೇ ವೈರಸ್​ಗೆ ಹೊಣೆ ಎಂಬ ಸಿದ್ಧಾಂತವನ್ನು ತಳ್ಳಿ ಹಾಕಿರುವ ಅವರು, ಜನವರಿಯಲ್ಲೇ ವಿಶ್ವ ಆರೋಗ್ಯ ಸಂಸ್ಥೆಗೆ ಎಲ್ಲ ಮಾಹಿತಿ ಒದಗಿಸಿಲಾಗಿದೆ ಎಂದಿದ್ದಾರೆ. ಪ್ರಾಣಿ ಮಾಂಸ ಮಾರಾಟ ಮಾರುಕಟ್ಟೆಯೊಂದರಲ್ಲಿ ಪ್ರಾಣಿಯೊಂದರಿಂದ ವೈರಸ್ ಮಾನವನಿಗೆ ಹಬ್ಬಿದೆ ಎಂಬುದು ಚೀನಾ ವಿಜ್ಞಾನಿಗಳ ವಿವರಣೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net