

ಪಂಜಾಬ್: ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದ ಖದೀಮರ ವಿರುದ್ಧ ನಡುರಸ್ತೆಯಲ್ಲೇ ಹೋರಾಡಿ ಕಳ್ಳನೊಬ್ಬನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದ 15ರ ಬಾಲಕಿಯ ಸಹಾಸಕ್ಕೆ ದೇಶದಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರ ಬೆನ್ನಲ್ಲೇ ಆಕೆಯ ಧೈರ್ಯಕ್ಕೆ ಶೌರ್ಯ ಪ್ರಶಸ್ತಿ ಲಭಿಸುವ ಸಾಧ್ಯತೆಯೂ ದಟ್ಟವಾಗಿದೆ. ಈ ನಡುವೆ ಆಕೆಗೆ ಬಂಬರ್ ಬಹುಮಾನವೂ ಸಿಕ್ಕಿದೆ.
ಕಳ್ಳರ ಹಲ್ಲೆಯಿಂದ ಗಾಯಗೊಂಡಿದ್ದ ಕುಸುಮ್ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ. ಕೂಲಿಕಾರ ಸಾಧು ರಾಮ್ ಅವರ ಮಗಳು ಕುಸುಮ್ಳ ಸಾಹಸವನ್ನು ಗೌರವಿಸಿ ಜಿಲ್ಲಾಧಿಕಾರಿ ಘನಶ್ಯಾಮ್ ಥೋರಿ ಅವರು 51,000 ರೂ. ನಗದು ಬಹುಮಾನ ಘೋಷಿಸಿದ್ದಾರೆ. ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಹಣ ಬಳಸಿಕೊಂಡು ಕುಸುಮ್‌ಗೆ ನಗದು ಪ್ರಶಸ್ತಿ ನೀಡಲಾಗುವುದು ಎಂದು ಥೋರಿ ತಿಳಿಸಿದ್ದಾರೆ.
ಇನ್ನು ಧೈರ್ಯಶಾಲಿ ಕುಸುಮ್ ಹೆಸರಿನ ಮ್ಯಾಸ್ಕಾಟ್ ಅನ್ನು ಶೀಘ್ರದಲ್ಲೇ ಅನಾವರಣಗೊಳಿಸಲಾಗುವುದು. ಈ ಬಗ್ಗೆ ಅವರ ಕುಟುಂಬದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಗುರ್ಮಿಂದರ್ ಸಿಂಗ್ ರಾಂಧವಾ ತಿಳಿಸಿದ್ದಾರೆ.