

ಬೆಂಗಳೂರು : ಕರೊನಾ ಲಾಕ್ಡೌನ್ನಿಂದ ಕ್ಲಬ್ ಮತ್ತು ಇತರ ವಿಹಾರ ಕೇಂದ್ರಗಳಿಗೂ ಬೀಗ ಬಿದ್ದಿದೆ. ಹೀಗಿರುವಾಗ ಜೂಜಿನ ಚಟ ಹತ್ತಿರುವವರು ಒಟ್ಟಾಗಿ ಸೇರಿ ಆಟವಾಡಲು ಒಂದಿಲ್ಲೊಂದು ಸ್ಥಳದ ಹುಡುಕಾಟದಲ್ಲಿದ್ದಾರೆ. ಇಂಥದೇ ಒಂದು ಪ್ರಸಂಗದಲ್ಲಿ ಡಿಅಡಿಕ್ಷನ್ ಸೆಂಟರ್ ಒಂದರಲ್ಲಿ ಜೂಜಾಟವಾಡುತ್ತಿದ್ದ 14 ಜನರನ್ನು ಇಂದು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹೊನ್ನಪ್ಪ ಎಂಬುವವರು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತುಂಗಾನಗರದಲ್ಲಿ ಮಹದೇಶ್ವರ ಡಿಅಡಿಕ್ಷನ್ ಸೆಂಟರ್ ಹೊಂದಿದ್ದರು. ಇಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು, ಸೆಂಟರ್ ಮೇಲೆ ದಾಳಿ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಅಲ್ಲಿದ್ದ 14 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಯಾರೂ ಡಿಅಡಿಕ್ಷನ್ ಸೆಂಟರ್‌ನ ರೋಗಿಗಳಾಗಿರಲಿಲ್ಲ. ಆರೋಪಿಗಳು ಡಿಅಡಿಕ್ಷನ್ ಸೆಂಟರನ್ನು ಜೂಜು ಅಡ್ಡೆ ಮಾಡಿಕೊಂಡಿರುವುದು ಗೊತ್ತಾಗಿದೆ. ಬಂಧಿತರಿಂದ ಜೂಜಿಗೆ ಬಳಸಿದ್ದ 78 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.