

ನವದೆಹಲಿ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಆರೋಪಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಕರೊನಾ ಸಂಬಂಧವಾಗಿ ಮಾತನಾಡುತ್ತಾ ಆಗಾಗ್ಗೆ ತೆರೆಯ ಮೇಲೆ ಕಾಣಿಸಿಕೊಳ್ಳುವಾಗ ಅವರ ಹಿಂದೆ ಕಂಡುಬರುವ ಧ್ವಜ ಅಲಂಕಾರಿಕವಾಗಿ ಬಳಸಲ್ಪಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ವಿಡಿಯೋ ಕಾನ್ಫರೆನ್ಸ್ಗಳಲ್ಲಿ ಕೇಜ್ರಿವಾಲ್ ಹಿಂದೆ ಕಾಣಿಸುವ ಧ್ವಜದ ಬಿಳಿ ಮತ್ತು ಹಸಿರು ಬಣ್ಣದ ಪಟ್ಟಿಗಳು ಸರಿಯಾದ ಗಾತ್ರದಲ್ಲಿ ಕಾಣುವುದಿಲ್ಲ. ಹೀಗಾಗಿ ಭಾರತದ ಫ್ಲ್ಯಾಗ್ ಕೋಡ್ಗೆ ವಿರುದ್ಧವಾಗಿವೆ ಎಂದಿರುವ ಪಟೇಲ್ ಅವರು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, "ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಟಿವಿಗಾಗಿ ಚಿತ್ರೀಕರಿಸಲಾದ ಹೇಳಿಕೆಯನ್ನು ಕೊಡುವಾಗಲೆಲ್ಲಾ ನನ್ನ ಗಮನ ಅವರ ಕುರ್ಚಿಯ ಹಿಂದಿನ ರಾಷ್ಟ್ರಧ್ವಜದ ಮೇಲೆ ಹೋಗುತ್ತದೆ... ಅದು ಸಂವಿಧಾನದ ಉಲ್ಲಂಘನೆಯಾಗಿದೆ. ರಾಷ್ಟ್ರ ಧ್ವಜವನ್ನು ಅಲಂಕಾರದ ಉದ್ದೇಶಕ್ಕಾಗಿ ಬಳಸಲಾಗಿದೆ" ಎಂದಿದ್ದಾರೆ.
"ಹಸಿರು ಪಟ್ಟಿಯು ಮಧ್ಯದ ಬಿಳಿ ಪಟ್ಟಿಯ ಮೇಲೆ ಬಂದ ಹಾಗೆ ಕಾಣುತ್ತದೆ. ಇದು ಧ್ವಜವನ್ನು ಪ್ರದರ್ಶಿಸುವ ಬಗ್ಗೆ ಇರುವ ಗೃಹ ಸಚಿವಾಲಯದ ನಿಯಮಗಳ ಪ್ರಕಾರವಿಲ್ಲ. ಇದನ್ನು ಪ್ರಜ್ಞಾಪೂರ್ವಕವಾಗಿ ಅಥವಾ ಉಪಪ್ರಜ್ಞೆಯಿಂದ ನಿರ್ಲಕ್ಷಿಸಿರುವ ಗೌರವಾನ್ವಿತ ಮುಖ್ಯಮಂತ್ರಿಗಳ ಗಮನಕ್ಕೆ ತರಲು ನಾನು ಬಯಸುತ್ತೇನೆ" ಎಂದಿದ್ದಾರೆ. (ಏಜೆನ್ಸೀಸ್)