ಲಖನೌ: ಕ್ಷುಲಕ ವಿಚಾರವಾಗಿ ಶುರುವಾದ ಗಲಾಟೆ ಓರ್ವ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರಪ್ರದೇಶದ ಬಲರಾಮ್ಪುರ್ ಜಿಲ್ಲೆಯ ಮದರಸಾ ಒಂದರಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸದ್ದು, ಬಾಲಮಂದಿರದಲ್ಲಿ ಇರಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಉತ್ತರ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಕುಮಾರ್, ಮೃತನನ್ನು ಮೆಹಫೂಜ್ ಅಯಾನ್ ಎಂದು ಗುರುತಿಸಲಾಗಿದ್ದು, ಜುಲೈ 30ರಂದು ಅಯಾನ್ ಮದರಸಾದಲ್ಲಿ ವಾಸಿಸುತ್ತಿದ್ದ ಮತ್ತೋರ್ವ ಸಹಪಾಠಿ ಕ್ಷುಲಕ ವಿಚಾರಕ್ಕೆ ಜಗಳವಾಡಿಕೊಂಡಿದ್ದಾರೆ. ಈ ವೇಳೆ ಅಯಾನ್ ಹಾಗೂ ಸಹಪಾಠಿ ಪರಸ್ಪರ ಧಮ್ಕಿ ಹಾಕಿದ್ದು, ಆರೋಪಿಯು ಅಯಾನ್ನನ್ನು ಹತ್ಯೆ ಮಾಡಲು ಯೋಜಿಸಿದ್ದ.
ಇದನ್ನೂ ಓದಿ: ವಯನಾಡು ದುರಂತ; ರಕ್ಷಣಾ ಪಡೆಗಳಿಗೆ ಕರೆ ಮಾಡಿ ಅನೇಕರನ್ನು ಉಳಿಸಿದ ಮಹಿಳೆ, ಆದ್ರೆ ವಿಧಿಯಾಟ ಬೇರೆಯೇ ಇತ್ತು!
ಅದರಂತೆ ಆಗಸ್ಟ್ 01ರಂದು ಮದರಸಾದಲ್ಲಿ ಮಕ್ಕಳು ಮಲಗಿದ್ದ ಬಳಿಕ ಆರೋಪಿಯು ಅಯಾನ್ಗೆ ಚಾಕುವಿನಿಂದ ಇರಿದು ಕತ್ತು ಹಾಗೂ ತಲೆಯ ಭಾಗವನ್ನು ದಿಂಬಿಗೆ ಜೋರಾಗಿ ಅದುಮಿದ್ದಾನೆ. ಆತ ಸತ್ತಿದ್ದಾನೆ ಎಂದು ತಿಳಿದ ಬಳಿಕ ಆರೋಪಿಯು ತನ್ನ ಜಾಗಕ್ಕೆ ಹೋಗಿ ಮಲಗಿದ್ದಾನೆ. ಬೆಳಗ್ಗೆ ಮದರಸಾದ ಉಸ್ತುವಾರಿಗಳು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಅಧಿಕಾರಿಗಳು ರೂಮಿನಲ್ಲಿದ್ದ ಮಕ್ಕಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಮೊದಲಿಗೆ ದಾರಿ ತಪ್ಪಿಸುವ ಕೆಲಸ ಮಾಡಿದ. ಆ ನಂತರ ತಪ್ಪೊಪ್ಪಿಕೊಂಡಿದ್ದಾನೆ. ಅಯಾನ್ನನ್ನು ಕೊಲ್ಲಲೆಂದೆ ಮಾರ್ಕೆಟ್ಗೆ ಹೋಗಿ ಚಾಕು ಖರೀದಿಸಿದಾಗಿಯೂ ಹೇಳಿಕೊಂಡಿದ್ದಾನೆ. ಇದಲ್ಲದೆ ರಾತ್ರಿ ಮಲಗುವ ಮುನ್ನ ಸಿಸಿಟಿವಿ ಆಫ್ ಮಾಡಿರುವ ಆರೋಪಿ ಬೆಳಗ್ಗೆ ಆನ್ ಮಾಡಿದ್ದಾನೆ. ವಿಚಾರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಉತ್ತರ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಕುಮಾರ್ ತಿಳಿಸಿದ್ದಾರೆ.