ಮಗನಿಗೆ 17 ಗಂಟೆ ವಿಡಿಯೋ ಗೇಮ್ ಆಡುವಂತೆ ಶಿಕ್ಷೆ; ಪುತ್ರನ ಅದೊಂದು ತಪ್ಪಿಗೆ ತಂದೆಯಿಂದ ಇಂಥಾ ದಂಡನೆಯಾ?

Boy
Published on

ಚೀನಾ: ತಂದೆಯೊಬ್ಬರು ತಮ್ಮ 11 ವರ್ಷದ ಮಗನಿಗೆ ಸತತ17 ಗಂಟೆಗಳ ಕಾಲ ವಿಡಿಯೋ ಗೇಮ್ ಆಡುವ ಶಿಕ್ಷೆ ವಿಧಿಸಿದ್ದಾರೆ. ಇದಕ್ಕೆ ಕಾರಣ ತನ್ನ ಮಗ ರಾತ್ರಿ ಹೊತ್ತಿನಲ್ಲಿ ನಿದ್ರಿಸದೆ, ವಿಡಿಯೋ ಗೇಮ್ ಆಡುತ್ತಾ ಸಿಕ್ಕಿಬಿದ್ದಿರುವುದು.

ಚೀನಾದ ಶೆನ್​ಜೆನ್​ನ ವಿದ್ಯಾರ್ಥಿಯೊಬ್ಬ ರಾತ್ರಿ 1 ಗಂಟೆ ವೇಳೆ ವಿಡಿಯೋ ಗೇಮ್ ಆಡುತ್ತಿದ್ದ. ಇದರಿಂದ ಸಿಟ್ಟಾದ ಹುವಾಂಗ್, ತನ್ನ ಮಗನಿಗೆ ಈ ಶಿಕ್ಷೆ ವಿಧಿಸಿದ್ದಾರೆ. ಬಾಲಕ ಕ್ಷಮೆ ಕೇಳಿದರೂ ತಂದೆ ಮಾತ್ರ ತನ್ನ ನಿರ್ಧಾರವನ್ನು ಬದಲಿಸಿಲ್ಲ.

ತನ್ನ ಮಗನಿಗೆ ಕಠಿಣ ಶಿಕ್ಷೆ ನೀಡಿರುವುದನ್ನು ಹುವಾಂಗ್ ಮೊಬೈಲ್​ನಲ್ಲಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಬಾಲಕ ವಿಡಿಯೋ ಗೇಮ್ ಆಡುತ್ತಿರುವುದನ್ನು ಕಾಣಬಹುದು. ವರದಿಯ ಪ್ರಕಾರ ಬಾಲಕ ಶಿಕ್ಷೆಯನ್ನು ಪೂರ್ಣಗೊಳಿಸಿ, ತಂದೆಗೆ ತನ್ನ ತಪ್ಪಿನ ಬಗ್ಗೆ ಪತ್ರ ಬರೆದಿದ್ದಾನೆ. ತನ್ನ ಟಿಪ್ಪಣಿಯಲ್ಲಿ "ನಾನು ಇನ್ನು ಮುಂದೆ ರಾತ್ರಿ 11 ಗಂಟೆಯ ಮೊದಲು ನಿದ್ರಿಸುತ್ತೇನೆ. ಮಲಗುವ ಮೊದಲು ಮೊಬೈಲ್​ನಲ್ಲಿ ಗೇಮ್ ಆಡುವುದಿಲ್ಲ ಎಂದು ಉಲ್ಲೇಖಿಸಿದ್ದಾನೆ. ಬಳಿಕ ತಂದೆ ಮಗನ ಮನವಿಗೆ ಒಪ್ಪಿಕೊಂಡು ಕಠಿಣ ಶಿಕ್ಷೆಯನ್ನು ರದ್ದುಗೊಳಿಸಿದ್ದಾನೆ ಎನ್ನಲಾಗಿದೆ.

ಬಾಲಕ ವಿಡಿಯೋ ಗೇಮಿಂಗ್​ನಲ್ಲಿ ತೊಡಗಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ತಂದೆಯ ಕ್ರಮಕ್ಕೆ ಟೀಕೆಗಳು ವ್ಯಕ್ತವಾಗಿವೆ. ಮಕ್ಕಳಿಗೆ ಸರಿಯಾದ ಕ್ರಮದಲ್ಲಿ ತಿಳಿಸಿ, ಬುದ್ದಿ ಹೇಳಬೇಕು. ಬದಲಾಗಿ ಇಂತಹ ಶಿಕ್ಷೆ ನೀಡುವುದು ಸರಿಯಲ್ಲ. ಇದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net