

ಕಲಬುರಗಿ: ಚಿತ್ತಾಪುರ ತಾಲೂಕಿನ ಹಲಕರ್ಟಿ-ಲಾಡ್ಲಾಪುರ ರಸ್ತೆ ಮಧ್ಯದಲ್ಲಿ ಕಳೆದ ರಾತ್ರಿ ಸಂಭವಿಸಿದ ಅಪಘಾತದಲ್ಲಿ ವಾಡಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಕರಿಯಪ್ಪ ಪೂಜಾರಿ (35) ಮೃತಪಟ್ಟಿದ್ದಾರೆ. ಘಟನೆ ಬೆಳಕಿಗೆ ಬಂದಾಗ ಕೊಲೆ ಎಂಬ ಶಂಕೆ ವ್ಯಕ್ತವಾಗಿತ್ತು.
ಬೈಕ್ನಲ್ಲಿ ಹೋಗುತ್ತಿದ್ದ ವೇಳೆಗೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಅಪಘಾತ ಮಾಡಿದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಮೃತ ಕರಿಯಪ್ಪ ಪೂಜಾರಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತೆಗ್ಗಳ್ಳಿ ಮೂಲದವರು. ವಾಡಿಯ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಯಾದಗಿರಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ ನಾಲವಾರ ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸಿದ್ದ ಹೆಡ್ಕಾನ್ಸ್ಟೇಬಲ್ ಕರಿಯಪ್ಪ ರಾತ್ರಿ 8 ಗಂಟೆಗೆ ಕರ್ತವ್ಯ ಮುಗಿದ ನಂತರ ಅಪರಿಚಿತ ಕಾರಿನಲ್ಲಿ ವಾಡಿ ಪೊಲೀಸ್ ಕ್ವಾಟ್ರಸ್‌ನ ಮನೆಗೆ ತೆರಳಿದ್ದು, ಎಂದಿನಂತೆ ಊಟ ಮಾಡಿ ಮಲಗಿದ್ದರು ಎನ್ನಲಾಗಿದೆ.
ತಡರಾತ್ರಿ ಎದ್ದು ಪುನಃ ನಾಲವಾರ ಚೆಕ್ ಪೋಸ್ಟ್ ಕಡೆಗೆ ಬೈಕ್ ಸವಾರಿ ಹೋದವರು ಸೋಮವಾರ ಬೆಳಗ್ಗೆ ಲಾಡ್ಲಾಪುರ ಗ್ರಾಮ ಸಮೀಪದ ಡಿಗ್ಗಿ ತಾಂಡಾ ಪಕ್ಕದ ಕೂಡು ರಸ್ತೆ ಸಮೀಪ ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಕೂಡಲೇ ಪೊಲೀಸರು ಭೇಟಿ ನೀಡಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮನೆಯವರು ಆಗಮಿಸಿದ ನಂತರ ಸ್ಥಳ ಪಂಚನಾಮೆ ಮಾಡಲಾಗಿದೆ. ಅಪಘಾತ ಎಂಬುವುದು ಸ್ಪಷ್ಟವಾಗಿದ್ದು, ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕಲಬುರ್ಗಿ ಎಸ್ಪಿ ಇಶಾ ಪಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.